ನೀರಜ್ ಚೋಪ್ರಾ ಎನ್‌ಸಿ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆ: ಅರ್ಷದ್ ನದೀಮ್ ಅಲಭ್ಯ

Update: 2025-04-24 21:08 IST
ನೀರಜ್ ಚೋಪ್ರಾ ಎನ್‌ಸಿ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆ: ಅರ್ಷದ್ ನದೀಮ್ ಅಲಭ್ಯ

ನೀರಜ್ ಚೋಪ್ರಾ ,  ಅರ್ಷದ್ ನದೀಮ್ | PC : PTI 

  • whatsapp icon

ಲಾಹೋರ್: ಬೆಂಗಳೂರಿನಲ್ಲಿ ಮೇ 24ರಂದು ನಡೆಯಲಿರುವ ಎನ್‌ಸಿ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಯಲ್ಲಿ ಸ್ಪರ್ಧಿಸಲು ನೀರಜ್ ಚೋಪ್ರಾ ನೀಡಿರುವ ಆಹ್ವಾನವನ್ನು ನಾನು ಸ್ವೀಕರಿಸಿಲ್ಲ. ಈ ಅವಧಿಯಲ್ಲೇ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯಶಿಪ್‌ ಗಾಗಿ ತರಬೇತಿ ನಿಗದಿಯಾಗಿದೆ ಎಂದು ಪಾಕಿಸ್ತಾನದ ಒಲಿಂಪಿಕ್ಸ್ ಚಾಂಪಿಯನ್ ಅರ್ಷದ್ ನದೀಮ್ ಬುಧವಾರ ಹೇಳಿದ್ದಾರೆ.

ಸ್ಪರ್ಧೆಗೆ ನನ್ನನ್ನು ಆಹ್ವಾನಿಸಿರುವ ನೀರಜ್ ಚೋಪ್ರಾಗೆ ಧನ್ಯವಾದ ಸಲ್ಲಿಸುವೆ ಎಂದು ನದೀಮ್ ಹೇಳಿದ್ದಾರೆ.

‘‘ಎನ್‌ಸಿ ಕ್ಲಾಸಿಕ್ ಸ್ಪರ್ಧೆಯು ಮೇ 24ರಂದು ನಡೆಯಲಿದ್ದು, ನಾನು ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಗಾಗಿ ಮೇ 22ರಂದು ಕೊರಿಯಾಕ್ಕೆ ತೆರಳುವೆ’’ ಎಂದು ನದೀಮ್ ಹೇಳಿದ್ದಾರೆ.

ಕೊರಿಯಾದ ಗುಮಿಯಲ್ಲಿ ಮೇ 27ರಿಂದ 31ರ ತನಕ ನಡೆಯಲಿರುವ ಏಶ್ಯನ್ ಚಾಂಪಿಯನ್‌ಶಿಪ್‌ ಗಾಗಿ ನಾನು ಕಠಿಣ ತರಬೇತಿ ನಿರತನಾಗಿದ್ದೇನೆ ಎಂದು ನದೀಮ್ ಹೇಳಿದ್ದಾರೆ.

ತನ್ನ ಹೆಸರಿನಲ್ಲಿ ನಡೆಯಲಿರುವ ಮೊದಲ ಆವೃತ್ತಿಯ ಜಾವೆಲಿನ್ ಸ್ಪರ್ಧೆಗೆ ನದೀಮ್‌ಗೆ ಆಹ್ವಾನ ಕಳುಹಿಸಿದ್ದೇನೆ ಎಂದು ಸೋಮವಾರ ನೀರಜ್ ಚೋಪ್ರಾ ಹೇಳಿದ್ದರು.

‘‘ನಾನು ಅರ್ಷದ್‌ಗೆ ಆಹ್ವಾನ ಕಳುಹಿಸಿದ್ದೇನೆ. ಅವರು ತಮ್ಮ ತರಬೇತುದಾರರೊಂದಿಗೆ ಚರ್ಚಿಸಿದ ನಂತರ ನನ್ನನ್ನು ಸಂಪರ್ಕಿಸುವುದಾಗಿ ಹೇಳಿದರು. ಸದ್ಯಕ್ಕೆ ಅವರು ಭಾಗವಹಿಸುವಿಕೆಯನ್ನು ಇನ್ನೂ ದೃಢಪಡಿಸಿಲ್ಲ’’ಎಂದು ಚೋಪ್ರಾ ಅವರು ಸೋಮವಾರ ವರ್ಚುವಲ್ ಮಾಧ್ಯಮ ಸಂವಾದದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

2024ರ ಪ್ಯಾರಿಸ್ ಒಲಿಂಪಿಕ್ ಗೇಮ್ಸ್‌ನಲ್ಲಿ 92.97 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದ ನದೀಮ್ ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದರು. ನೀರಜ್ ಚೋಪ್ರಾ 89.45 ಮೀ.ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕ ಜಯಿಸಿದ್ದರು.

ಮೊದಲ ಆವೃತ್ತಿಯ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಇವೆಂಟ್‌ ನಲ್ಲಿ ಸ್ಟಾರ್‌ ಗಳಾದ ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ ಹಾಗೂ ಜರ್ಮನಿಯ ಥಾಮಸ್ ರೊಹ್ಲೆರ್ ಭಾಗವಹಿಸಲಿದ್ದಾರೆ. ಆ್ಯಂಡರ್ಸನ್ ಪೀಟರ್ಸ್ ಎರಡು ಬಾರಿಯ ವಿಶ್ವ ಚಾಂಪಿಯನ್ ಆಗಿದ್ದರೆ, ಥಾಮಸ್ ರೋಹ್ಲರ್ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಈ ಸ್ಪರ್ಧಾವಳಿಗೆ ವಿಶ್ವ ಅತ್ಲೆಟಿಕ್ಸ್ ‘ಎ’ ವರ್ಗದ ಸ್ಥಾನಮಾನ ನೀಡಿದೆ.

ಈ ಪಂದ್ಯಾವಳಿಯನ್ನು ಚೋಪ್ರಾ ಹಾಗೂ ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ಜಂಟಿಯಾಗಿ ಭಾರತದ ಅತ್ಲೆಟಿಕ್ಸ್ ಒಕ್ಕೂಟ(ಎಎಫ್‌ಐ) ಹಾಗೂ ವಿಶ್ವ ಅತ್ಲೆಟಿಕ್ಸ್ ಸಹಯೋಗದೊಂದಿಗೆ ಆಯೋಜಿಸಲಿದ್ದು, ಇದರಲ್ಲಿ ಉನ್ನತ ಜಾಗತಿಕ ಹಾಗೂ ಭಾರತೀಯ ಜಾವೆಲಿನ್ ಎಸೆತಗಾರರು ಭಾಗವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News