ಡೈಮಂಡ್ ಲೀಗ್ ನ ಮೂಲಕ ಈ ವರ್ಷದ ಅಭಿಯಾನ ಆರಂಭಿಸಲಿರುವ ನೀರಜ್ ಚೋಪ್ರಾ

ನೀರಜ್ ಚೋಪ್ರಾ | PTI
ಹೊಸದಿಲ್ಲಿ: ‘‘ಖತರ್ ರಾಜಧಾನಿಯಲ್ಲಿ ಮೇ 16ರಂದು ನಿಗದಿಯಾಗಿರುವ ದೋಹಾ ಡೈಮಂಡ್ ಲೀಗ್ ನ ಮೂಲಕ ಈ ವರ್ಷ ತನ್ನ ಅಭಿಯಾನವನ್ನು ಆರಂಭಿಸುವೆ’’ಎಂದು ಡಬಲ್ ಒಲಿಂಪಿಯನ್, ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮಂಗಳವಾರ ದೃಢಪಡಿಸಿದರು.
‘‘ಸತತ ಮೂರನೇ ವರ್ಷ ದೋಹಾದಲ್ಲಿ ನಡೆಯಲಿರುವ ವಂಡಾ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಅತ್ಲೆಟಿಕ್ಸ್‌ನ ಅತ್ಯಂತ ಉತ್ಸಾಹಭರಿತ ಜನಸಮೂಹದ ಮುಂದೆ ಸ್ಪರ್ಧಿಸಲು ಎದುರು ನೋಡುತ್ತಿದ್ದೇನೆ’’,ಎಂದು ಚೋಪ್ರಾ ಹೇಳಿದರು.
ಚೋಪ್ರಾ ಅವರು 2023ರಲ್ಲಿ 88.67 ಮೀ.ದೂರಕ್ಕೆ ಜಾವೆಲಿನ್ ಎಸೆದು ಖತರ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಯಶಾಲಿಯಾಗಿದ್ದಾರೆ. ಈ ಕ್ರೀಡಾಕೂಟದಲ್ಲಿ 3ನೇ ಬಾರಿ ಕಾಣಿಸಿಕೊಳ್ಳುವ ಮೊದಲು ಪ್ರತಿಕ್ರಿಯಿಸಿರುವ ಚೋಪ್ರಾ, ‘‘ಖತರ್‌ನಲ್ಲಿ ಭಾರತೀಯ ಅಭಿಮಾನಿಗಳ ಬೆಂಬಲವನ್ನು ಎದುರು ನೋಡುತ್ತಿರುವೆ’’ಎಂದಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಚಿನ್ನ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿರುವ ಭಾರತದ ಮೊದಲ ಟ್ರ್ಯಾಕ್ ಹಾಗೂ ಫೀಲ್ಡ್ ಅತ್ಲೀಟ್ ಆಗಿರುವ ಚೋಪ್ರಾ, ಡೈಮಂಡ್ ಲೀಗ್ ಕ್ರೀಡಾಕೂಟ ಹಾಗೂ ಡೈಮಂಡ್ ಲೀಗ್ ಪ್ರಶಸ್ತಿ ಜಯಿಸಿರುವ ಭಾರತದ ಮೊದಲ ಅತ್ಲೀಟ್ ಆಗಿದ್ದಾರೆ.
ಚೋಪ್ರಾ ಕಳೆದ ವರ್ಷ ನಡೆದ ಒಲಿಂಪಿಕ್ಸ್ ಫೈನಲ್ ನಲ್ಲಿ ಸ್ವಲ್ಪದರಲ್ಲೇ ಚಿನ್ನದ ಪದಕದಿಂದ ವಂಚಿತರಾಗಿದ್ದರು. ಪಾಕಿಸ್ತಾನದ ಅರ್ಷದ್ ನದೀಮ್ ಹಾಗೂ ಆ್ಯಂಡರ್ಸನ್ ಪೀಟರ್ಸ್ ಮೊದಲನೇ ಹಾಗೂ 3ನೇ ಸ್ಥಾನ ಪಡೆದಿದ್ದರು.
ಚೋಪ್ರಾ ಅವರು ದೋಹಾ ಕ್ರೀಡಾಕೂಟದ ನಂತರ ಮೇ 24ರಂದು ಪಂಚಕುಲದಲ್ಲಿ ನಡೆಯಲಿರುವ ‘ನೀರಜ್ ಚೋಪ್ರಾ ಕ್ಲಾಸಿಕ್’ಜಾವೆಲಿನ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.