ದಕ್ಷಿಣ ಆಫ್ರಿಕಾದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ
Photo Credit: PTI
ಹೊಸದಿಲ್ಲಿ: ಡಬಲ್ ಒಲಿಂಪಿಯನ್ ನೀರಜ್ ಚೋಪ್ರಾ ಅವರು ದಕ್ಷಿಣ ಆಫ್ರಿಕಾದಲ್ಲಿ ಬುಧವಾರ ನಡೆದ ಪಾಚೆಫ್ಸ್ಟ್ರೂಮ್ ಆಹ್ವಾನಿತ ಕ್ರೀಡಾಕೂಟದಲ್ಲಿ 84.52 ಮೀ.ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಜಯಿಸಿದರು. ಈ ಮೂಲಕ 2025ರ ಆವೃತ್ತಿಯಲ್ಲಿ ಶುಭಾರಂಭಗೈದರು.
ಆರು ಸ್ಪರ್ಧಿಗಳಿದ್ದ ಫೈನಲ್ನಲ್ಲಿ ಅಗ್ರ ಸ್ಥಾನ ಪಡೆದಿರುವ ಚೋಪ್ರಾ ದಕ್ಷಿಣ ಆಫ್ರಿಕಾದ ಜಾವೆಲಿನ್ ಎಸೆತಗಾರ ಡೌವ್ ಸ್ಮಿತ್ರನ್ನು ಹಿಂದಿಕ್ಕಿದರು. ಸ್ಮಿತ್ 82.44 ಮೀ.ದೂರಕ್ಕೆ ಜಾವೆಲಿನ್ ಎಸೆದರು. ಭಾರತೀಯ ಸ್ಟಾರ್ ಚೋಪ್ರಾ ಹಾಗೂ 25ರ ಹರೆಯದ ಸ್ಮಿತ್ ಮಾತ್ರ 80 ಮೀ. ದೂರವನ್ನು ಮೀರಿ ನಿಂತರು. ಸ್ಥಳೀಯ ಅತ್ಲೀಟ್ ಡಂಕನ್ ರಾಬರ್ಟ್ಸನ್(71.22ಮೀ.)3ನೇ ಶ್ರೇಷ್ಠ ಪ್ರದರ್ಶನ ನೀಡಿದರು.
ನೀರಜ್ ಚೋಪ್ರಾ ಮೇ 16ರಂದು ದೋಹಾ ಡೈಮಂಡ್ ಲೀಗ್ನಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಅವರು ಕಠಿಣ ಸ್ಪರ್ಧೆ ಎದುರಿಸಲಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 89.45 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದ ಚೋಪ್ರಾ ಬೆಳ್ಳಿ ಪದಕ ಜಯಿಸಿದ್ದರು. ಪಾಕಿಸ್ತಾನದ ಅರ್ಷದ್ ನದೀಮ್ ನೂತನ ಒಲಿಂಪಿಕ್ಸ್ ದಾಖಲೆ(92.97 ಮೀ.)ಯೊಂದಿಗೆ ಚಿನ್ನಕ್ಕೆ ಮುತ್ತಿಟ್ಟಿದ್ದರು.