ಶಾರ್ದುಲ್ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸಿದ ಬಿಹಾರದ 14ರ ಬಾಲಕ

Update: 2025-04-20 21:09 IST
ಶಾರ್ದುಲ್ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸಿದ ಬಿಹಾರದ 14ರ ಬಾಲಕ

Photo : X

  • whatsapp icon

ಹೊಸದಿಲ್ಲಿ: ರಿಷಭ್ ಪಂತ್‌ರಿಂದ ಸ್ಟಂಪ್ಔಟ್ ಆಗಿ ಡಗೌಟ್ ನತ್ತ ನಡೆದುಕೊಂಡು ಹೋಗುತ್ತಿದ್ದಾಗ ವೈಭವ್ ಸೂರ್ಯವಂಶಿ ಕಣ್ಣಲ್ಲಿ ನೀರು ತುಂಬಿತ್ತ್ತು. ಶನಿವಾರ ಐಪಿಎಲ್ ಗೆ ಕಾಲಿಟ್ಟ ಅತ್ಯಂತ ಕಿರಿಯ ವಯಸ್ಸಿನ ಆಟಗಾರನೆಂಬ ಕೀರ್ತಿಗೆ ಭಾಜನರಾದ 14ರ ಹರೆಯದ ಬ್ಯಾಟರ್ ಗೆ ಈ ರೀತಿಯಲ್ಲಿ ಔಟ್ ಆಗಿದ್ದನ್ನು ಸಹಿಸಲು ಸಾಧ್ಯವಾಗಲಿಲ್ಲ.

ವೈಭವ್ ಔಟಾದ ನಿರಾಶೆಯೊಂದಿಗೆ ನಿಧಾನವಾಗಿ ನಡೆದುಕೊಂಡ ಹೋಗುತ್ತಿದ್ದಾಗ ಸವಾಯಿ ಮಾನ್ಸಿಂಗ್ ಸ್ಟೇಡಿಯಮ್ನಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರು ವೈಭವ್ ಹೆಸರನ್ನು ಕೂಗುತ್ತಾ ಆತನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವೈಭವ್ ಅನುಭವಿ ವೇಗಿ ಶಾರ್ದುಲ್ ಠಾಕೂರ್ ಎಸೆತವನ್ನು ಸಿಕ್ಸರ್ಗೆ ಅಟ್ಟಿ ತನ್ನ ಐಪಿಎಲ್ ಅಭಿಯಾನ ಆರಂಭಿಸುತ್ತಾರೆೆಂದು ಯಾರೂ ಊಹಿಸಿರಲಿಲ್ಲ. 20 ಎಸೆತಗಳಲ್ಲಿ 3 ಸಿಕ್ಸರ್, 2 ಬೌಂಡರಿಗಳ ಸಹಿತ 34 ರನ್ ಗಳಿಸಿದ ವೈಭವ್ ಎಲ್ಲಿಯೂ ಕೂಡ ಒತ್ತಡದಲ್ಲಿದ್ದಂತೆ ಕಂಡುಬರಲಿಲ್ಲ.

ವೈಭವ್ ಅವರ ಬ್ಯಾಟಿಂಗ್ ವೈಭವಕ್ಕೆ ಭಾರತದ ಮಾಜಿ ನಾಯಕ ಕೆ.ಶ್ರೀಕಾಂತ್ ಸಹಿತ ಕ್ರಿಕೆಟ್ ಸಮುದಾಯ ತಲೆದೂಗಿದೆ. 16ರ ವಯಸ್ಸಿನಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಸಚಿನ್ ತೆಂಡುಲ್ಕರ್ ಅವರನ್ನು ಶ್ರೀಕಾಂತ್ ಇದೇ ವೇಳೆ ನೆನಪಿಸಿಕೊಂಡರು.

ಬಿಹಾರದ ಪಾಟ್ನಾದಿಂದ ಸುಮಾರು 100 ಕಿ.ಮೀ.ದೂರದಲ್ಲಿರುವ ಸಮಸ್ಟಿಪುರದ ವೈಭವ್ ಎಂ.ಎಸ್. ಧೋನಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದ ವರ್ಷವೇ 2011ರ ಮಾರ್ಚ್ 27ರಂದು ಜನಿಸಿದ್ದರು. ಕೇವಲ 4ನೇ ವಯಸ್ಸಿನಲ್ಲಿ ಪ್ಲಾಸ್ಟಿಕ್ ಚೆಂಡನ್ನು ಹೆಚ್ಚು ಶಕ್ತಿಯೊಂದಿಗೆ ಬಾರಿಸುತ್ತಿದ್ದ ಮಗನನ್ನು ಗಮನಿಸಿದ್ದ ರೈತನಾಗಿರುವ ವೈಭವ್ ತಂದೆ ಸಂಜೀವ್ ಸೂರ್ಯವಂಶಿ ಹೊಲದಲ್ಲಿ ದಿನಪೂರ್ತಿ ಕೆಲಸ ಮಾಡಿದ ನಂತರ ತನ್ನ ಮಗನೊಂದಿಗೆ ಕ್ರಿಕೆಟ್ ಆಡುತ್ತಿದ್ದರು. ಸಂಜೀವ್ ಅವರು ಮನೆ ಸಮೀಪ ಸಣ್ಣ ಅಭ್ಯಾಸ ಪ್ರದೇಶವನ್ನು ಸೃಷ್ಟಿಸಿ ವೈಭವ್ ಕೌಶಲ್ಯಗಳನ್ನು ಅಭಿವೃದ್ದಿಪಡಿಸಲು ಅವಕಾಶ ಒದಗಿಸಿದರು.

ಕ್ರಿಕೆಟ್ ಮೇಲಿನ ವ್ಯಾಮೋಹ ಹಾಗೂ ಬದ್ಧತೆಯಿಂದ ಪ್ರಭಾವಿತರಾದ ಸಂಜೀವ್ ತನ್ನ ಮಗನನ್ನು ಸಮಸ್ಟಿಪುರದ ಕ್ರಿಕೆಟ್ ಅಕಾಡಮಿಗೆ ಸೇರಿಸಿದ್ದು, ಬ್ರಿಜೇಶ್ ಝಾ ಅವರು ವೈಭವ್ ಅವರ ಮೊದಲ ಕೋಚ್ ಆಗಿದ್ದಾರೆ. ಪಾಟ್ನಾದ ಮನೀಶ್ ಝಾ ಅವರು ವೈಭವ್ ಅವರ ಕ್ರಿಕೆಟ್ ಕೌಶಲ್ಯಗಳನ್ನು ಹೆಚ್ಚಿಸಿದರು.

ವೈಭವ್ ಕಳೆದ ವರ್ಷ ಜನವರಿಯಲ್ಲಿ ಮುಂಬೈ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪಣೆಗೈದಿದ್ದರು. 2024-25ರ ದೇಶೀಯ ಋತುವಿನಲ್ಲಿ ಬಿಹಾರದ ಪರ 5 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಸೆಪ್ಟಂಬರ್ನಲ್ಲಿ ಆಸ್ಟ್ರೇಲಿಯ ವಿರುದ್ಧ ಯೂತ್ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ 58 ಎಸೆತಗಳಲ್ಲಿ ಶತಕ ಗಳಿಸಿದ್ದರು. ಅಂಡರ್-19 ಏಶ್ಯ ಕಪ್ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಜೂನಿಯರ್ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡಿರುವ ವೈಭವ್ ಎಲ್ಲರ ಗಮನ ಸೆಳೆದಿದ್ದರು.

ಕಳೆದ ವರ್ಷದ ನವೆಂಬರ್ನಲ್ಲಿ ನಡೆದಿದ್ದ ಮೆಗಾ ಹರಾಜಿನ ವೇಳೆ ರಾಜಸ್ಥಾನ ರಾಯಲ್ಸ್ ತಂಡವು 1.10 ಕೋ.ರೂ.ಗೆ ವೈಭವ್ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಆ ನಂತರ ವೈಭವ್ ಅವರು ನಾಗ್ಪುರದ ರಾಜಸ್ಥಾನದ ಅಕಾಡಮಿಯಲ್ಲಿ ದೀರ್ಘ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ್ದರು.

ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ವೈಭವ್ ಅವರು ಶನಿವಾರ ಲಕ್ನೊ ವಿರುದ್ಧ ಚೊಚ್ಚಲ ಪಂದ್ಯ ಆಡುವ ಅಪೂರ್ವ ಅವಕಾಶ ಪಡೆದರು.

► ಕ್ರಿಕೆಟ್ ಗಾಗಿ ಪಿಝ್ಝಾ, ಮಟನ್ ತ್ಯಜಿಸಿದ ವೈಭವ್

ಸಾಮಾನ್ಯವಾಗಿ 14 ವರ್ಷದ ಮಕ್ಕಳು ಹೊಟೇಲ್ ಗೆ ಹೋಗಿ ತಮ್ಮ ನೆಚ್ಚಿನ ತಿಂಡಿ-ತಿನಿಸುಗಳನ್ನು ತಿನ್ನುತ್ತಾರೆ. ವೈಭವ್ ಸೂರ್ಯವಂಶಿ ತನ್ನ ಕ್ರಿಕೆಟ್ ಕನಸು ಕೈಗೂಡಲು ಈಗಾಗಲೆ ಕೆಲವು ತ್ಯಾಗಗಳನ್ನು ಮಾಡಿದ್ದಾರೆ. ತನ್ನ ಎರಡು ನೆಚ್ಚಿನ ತಿನಿಸುಗಳಾದ ಪಿಝ್ಝಾ ಹಾಗೂ ಮಟನ್ ತ್ಯಜಿಸಿದ್ದಾರೆ. ಆಹಾರದಲ್ಲಿನ ಶಿಸ್ತು ಅವರಿಗೆ ಫಲ ಕೊಟ್ಟಿದೆ.

‘‘ಸೂಚನೆಗಳ ಪ್ರಕಾರ ವೈಭವ್ ಗೆ ಮಟನ್ ತಿನ್ನಲು ಅವಕಾಶವಿಲ್ಲ. ಪಿಝ್ಝಾವನ್ನು ಅವರ ಆಹಾರದ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಆತನಿಗೆ ಕೋಳಿ ಹಾಗೂ ಮಟನ್ ಅಂದರೆ ತುಂಬಾ ಇಷ್ಟ. ಪಿಝ್ಝಾ

ಕೂಡ ತುಂಬಾ ಇಷ್ಟದ ಆಹಾರ. ಅವನು ಅದನ್ನು ಈಗ ತಿನ್ನುವುದಿಲ್ಲ. ನಾವು ಅವನಿಗೆ ಎಷ್ಟೇ ಮಟನ್ ಕೊಟ್ಟರೂ ಅದನ್ನೆಲ್ಲಾ ತಿಂದು ಮುಗಿಸುತ್ತಿದ್ದ. ಹೀಗಾಗಿಯೇ ಆತ ಸ್ವಲ್ಪ ದಪ್ಪನಾಗಿ ಕಾಣುತ್ತಾನೆ’ಎಂದು ಕೋಚ್ ಮನೀಶ್ ಓಜಾ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News