ಏಕದಿನ, ಟಿ-20 ರ‍್ಯಾಂಕಿಂಗ್: ಅಗ್ರ-3ರಲ್ಲಿ ಸ್ಥಾನ ಪಡೆದ ಸ್ಮೃತಿ ಮಂಧಾನ
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಉಪ ನಾಯಕಿ ಸ್ಮೃತಿ ಮಂಧಾನ ಅವರು ಮಂಗಳವಾರ ಬಿಡುಗಡೆಯಾದ ಐಸಿಸಿ ಏಕದಿನ ರ‍್ಯಾಂಕಿಂಗ್ ಹಾಗೂ ಟಿ-20 ರ‍್ಯಾಂಕಿಂಗ್ ನಲ್ಲಿ ಅಗ್ರ-3ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಏಕದಿನ ರ‍್ಯಾಂಕಿಂಗ್ ನಲ್ಲಿ ಮೂರು ಸ್ಥಾನ ಭಡ್ತಿ ಪಡೆದಿರುವ ಮಂಧಾನ ಅವರು 2ನೇ ಸ್ಥಾನ ತಲುಪಿದ್ದಾರೆ. ಟಿ20 ರ‍್ಯಾಂಕಿಂಗ್ ನಲ್ಲೂ ಪ್ರಗತಿ ಸಾಧಿಸಿರುವ ಮಂಧಾನ ಒಂದು ಸ್ಥಾನ ಮೇಲಕ್ಕೇರಿ 3ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧದ ಶ್ರೇಷ್ಠ ಪ್ರದರ್ಶನದ ನಂತರ ಮಂಧಾನ ಈ ಭಡ್ತಿ ಪಡೆದಿದ್ದಾರೆ.
ಎಡಗೈ ಆಟಗಾರ್ತಿ ಮಂಧಾನ ಆಸ್ಟ್ರೇಲಿಯ ವಿರುದ್ಧ ಪರ್ತ್‌ನಲ್ಲಿ ನಡೆದಿದ್ದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ 105 ರನ್ ಗಳಿಸಿದ್ದರು. ಮುಂಬೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಈಗ ನಡೆಯುತ್ತಿರುವ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ 54 ರನ್ ಗಳಿಸಿದ್ದಾರೆ.
ಮಂಧಾನ ಅವರು ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿರುವ ಭಾರತದ ಏಕೈಕ ಬ್ಯಾಟರ್ ಆಗಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ 2 ಸ್ಥಾನ ಕೆಳಜಾರಿ 13ನೇ ಸ್ಥಾನ ಪಡೆದರೆ, ಜೆಮಿಮಾ ರೋಡ್ರಿಗಸ್ ಅವರು 6 ಸ್ಥಾನ ಮೇಲಕ್ಕೇರಿ 15ನೇ ಸ್ಥಾನ ತಲುಪಿದ್ದಾರೆ. ಹರ್ಲೀನ್ ಡೆವೊಲ್ 9 ಸ್ಥಾನ ಭಡ್ತಿ ಪಡೆದು 64ನೇ ರ್ಯಾಂಕಿಗೆ ಏರಿದ್ದಾರೆ.
ಬೌಲಿಂಗ್ ರ‍್ಯಾಂಕಿಂಗ್ ನಲ್ಲಿ ದೀಪ್ತಿ ಶರ್ಮಾ ಅವರು 2 ಸ್ಥಾನ ಕಳೆದುಕೊಂಡು 5ನೇ ಸ್ಥಾನದಲ್ಲಿದ್ದಾರೆ.
ಭಾರತದ ವೇಗದ ಬೌಲರ್ ಅರುಂಧತಿ ರೆಡ್ಡಿ ಅವರು ರ್ಯಾಂಕಿಂಗ್‌ನಲ್ಲಿ 48 ಸ್ಥಾನ ಭಡ್ತಿ ಪಡೆದು 51ನೇ ಸ್ಥಾನ ತಲುಪಿದ್ದಾರೆ. ರೇಣುಕಾ ಠಾಕೂರ್ 28ನೇ ಸ್ಥಾನದಿಂದ 26ನೇ ಸ್ಥಾನಕ್ಕೇರಿದರು.
ಟಿ-20 ರ್ಯಾಂಕಿಂಗ್‌ನಲ್ಲಿ ಕೌರ್ ಅಗ್ರ-10ರಲ್ಲಿ ಉಳಿದುಕೊಂಡಿದ್ದಾರೆ. 6 ಸ್ಥಾನ ಮೇಲಕ್ಕೇರಿರುವ ರೋಡ್ರಿಗಸ್ 15ನೇ ಸ್ಥಾನ ಪಡೆದಿದ್ದಾರೆ.
ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ದೀಪ್ತಿ ಅವರು ಎರಡು ಸ್ಥಾನ ಮೇಲಕ್ಕೇರಿ 2ನೇ ಸ್ಥಾನ ಪಡೆದಿದ್ದಾರೆ.