ಒಲಿಂಪಿಕ್ ಪದಕ ಗಳಿಕೆ: ಪಾಕಿಸ್ತಾನಕ್ಕೆ 58ನೇ ಸ್ಥಾನ; ಭಾರತಕ್ಕೆ 69

Update: 2024-08-10 02:44 GMT

PC:PTI

ಪ್ಯಾರಿಸ್: ವಿಶ್ವದ ಅತಿದೊಡ್ಡ ಕ್ರೀಡಾಕೂಟವಾದ ಒಲಿಂಪಿಕ್ಸ್ ಮುಕ್ತಾಯದ ಹಂತ ತಲುಪಿದ್ದು, ಭಾರತ ಒಂದು ಬೆಳ್ಳಿ ಹಾಗೂ 5 ಕಂಚಿನ ಪದಕಗಳೊಂದಿಗೆ ಒಟ್ಟು ಆರು ಪದಕಗಳೊಂದಿಗೆ ಅಭಿಯಾನ ಮುಕ್ತಾಯಗೊಳಿಸಲಿದೆ. ದೇಶಕ್ಕೆ ಚಿನ್ನದ ಪದಕ ಗಳಿಸಿಕೊಡುವ ನಿರೀಕ್ಷೆ ಇದ್ದ ಭಾರತದ ಜಾವೆಲಿನ್ ಥ್ರೋ ಹೀರೊ ನೀರಜ್ ಚೋಪ್ರಾ ಬೆಳ್ಳಿಯ ಸಾಧನೆ ಮಾಡಿದರೆ, ವಿನೇಶ್ ಫೋಗಟ್ 50 ಕೆ.ಜಿ ಮಹಿಳೆಯರ ಫ್ರೀಸ್ಟೈಲ್ ಫೈನಲ್ ನಲ್ಲಿ ಅನರ್ಹಗೊಂಡಿದ್ದಾರೆ.

ನೀರಜ್ ಕಳೆದ ಒಲಿಂಪಿಕ್ಸ್ ಗಿಂತ ಎರಡು ಮೀಟರ್ ಹೆಚ್ಚು ದೂರಕ್ಕೆ ಜಾವೆಲಿನ್ ಎಸೆದರೂ, ಪಾಕಿಸ್ತಾನದ ಅರ್ಷದ್ ನದೀಮ್, ಒಲಿಂಪಿಕ್ಸ್ ದಾಖಲೆ ಬರೆಯುವ ಮೂಲಕ  ನಂ.1 ಸ್ಥಾನ ಅಲಂಕರಿಸಿದರು. ಇದರಿಂದ ಪಾಕಿಸ್ತಾನ ಪದಕ ಪಟ್ಟಿಯಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನ ಪಡೆದಿದೆ.

ಹದಿನಾಲ್ಕನೇ ದಿನದ ಅಂತ್ಯಕ್ಕೆ ಪಾಕಿಸ್ತಾನ ಏಕೈಕ ಚಿನ್ನದ ಪದಕದೊಂದಿಗೆ 58ನೇ ಸ್ಥಾನದಲ್ಲಿದ್ದರೆ ಐದು ಕಂಚು ಮತ್ತು ಒಂದು ಬೆಳ್ಳಿ ಪದಕದೊಂದಿಗೆ ಭಾರತ 69ನೇ ಸ್ಥಾನದಲ್ಲಿದೆ. ಪಾಕಿಸ್ತಾನಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದರೂ ಭಾರತ ಪದಕ ಪಟ್ಟಿಯಲ್ಲಿ ತನ್ನ ನೆರೆರಾಷ್ಟ್ರಕ್ಕೆ ಹೋಲಿಸಿದರೆ 11 ಸ್ಥಾನದಷ್ಟು ಹಿಂದಿದೆ. ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಆಯ್ಕೆ ಮಾಡಿಕೊಂಡ ರ‍್ಯಾಂಕಿಂಗ್ ವಿಧಾನ ಇದಕ್ಕೆ ಕಾರಣ.

ಒಲಿಂಪಿಕ್ ಕೂಟದಲ್ಲಿ ಆಯಾ ದೇಶ ಗೆದ್ದ ಚಿನ್ನದ ಪದಕದ ಆಧಾರದಲ್ಲಿ ರ‍್ಯಾಂಕಿಂಗ್ ನೀಡಲಾಗುತ್ತದೆ. ಒಂದು ದೇಶ 10 ಬೆಳ್ಳಿ ಅಥವಾ ಕಂಚಿನ ಪದಕ ಪಡೆದರೂ, ಏಕೈಕ ಚಿನ್ನದ ಪದಕ ಪಡೆದ ರಾಷ್ಟ್ರಕ್ಕಿಂತ ಕೆಳಗಿರುತ್ತದೆ. ಎರಡು ದೇಶಗಳು ಸಮಾನ ಸಂಖ್ಯೆಯ ಚಿನ್ನದ ಪದಕ ಗೆದ್ದಲ್ಲಿ, ಬೆಳ್ಳಿ ಹಾಗೂ ಕಂಚಿನ ಪದಕಗಳು ಗಣನೆಗೆ ಬರುತ್ತವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News