ಇಂಗ್ಲೆಂಡ್ ವಿರುದ್ಧ ಪಾಕ್‌ಗೆ 9 ವಿಕೆಟ್ ಜಯ
ರಾವಲ್ಪಿಂಡಿ : ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವನ್ನು ಪಾಕಿಸ್ತಾನವು ಮೂರೇ ದಿನಗಳಲ್ಲಿ ಶನಿವಾರ ಭರ್ಜರಿ 9 ವಿಕೆಟ್‌ಗಳಿಂದ ಗೆದ್ದಿದೆ.
ಇದರೊಂದಿಗೆ ಪಾಕಿಸ್ತಾನವು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದಿದೆ. ಇದು 2021ರ ಬಳಿಕ, ತವರಿನಲ್ಲಿ ಪಾಕಿಸ್ತಾನದ ಮೊದಲ ಟೆಸ್ಟ್ ಸರಣಿ ಜಯವಾಗಿದೆ.
ಸರಣಿಯ ಮೊದಲ ಪಂದ್ಯವನ್ನು ಇಂಗ್ಲೆಂಡ್ ಗೆದ್ದಿದ್ದರೆ, ನಂತರದ ಎರಡೂ ಪಂದ್ಯಗಳನ್ನು ಗೆಲ್ಲುವಲ್ಲಿ ಆತಿಥೇಯ ತಂಡ ಯಶಸ್ವಿಯಾಗಿದೆ. ಮೂರನೇ ದಿನದ ಆಟದ ಭೋಜನ ವಿರಾಮಕ್ಕೂ ಮೊದಲೇ ಪಾಕಿಸ್ತಾನವು ಗೆದ್ದಿತು.
ಪಾಕಿಸ್ತಾನದ ಬೌಲರ್ ಗಳಾದ ನೂಮನ್ ಅಲಿ ಮತ್ತು ಸಾಜಿದ್ ಖಾನ್ ಇಂಗ್ಲೆಂಡ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ತಮ್ಮ ನಡುವೆ ಹಂಚಿಕೊಂಡರು. ನೂಮನ್ ಅಲಿ 42 ರನ್‌ಗಳನ್ನು ನೀಡಿ 6 ವಿಕೆಟ್‌ಗಳನ್ನು ಉರುಳಿಸಿದರೆ, ಸಾಜಿದ್ ಖಾನ್ 69 ರನ್‌ಗಳನ್ನು ಕೊಟ್ಟು 4 ವಿಕೆಟ್‌ಗಳನ್ನು ಪಡೆದರು. ಇದು ನೂಮನ್‌ರ 6ನೇ 5 ವಿಕೆಟ್ ಗೊಂಚಿಲು ಆಗಿದೆ. ಸಾಜಿದ್ ಈ ಪಂದ್ಯದಲ್ಲಿ 10 ವಿಕೆಟ್ ಗಳಿಸಿದ್ದಾರೆ. ಇದು ಅವರ 10 ಟೆಸ್ಟ್‌ಗಳ ಕ್ರೀಡಾ ಜೀವನದಲ್ಲಿ ಎರಡನೇ ಬಾರಿಯಾಗಿದೆ. ಮೊದಲ ಇನಿಂಗ್ಸ್‌ನಲ್ಲಿ ಅವರು 128 ರನ್‌ಗಳನ್ನು ಕೊಟ್ಟು 6 ವಿಕೆಟ್ ಉರುಳಿಸಿದ್ದರು.
ಇಂಗ್ಲೆಂಡ್ ಕೇವಲ 112 ರನ್‌ಗಳಿಗೆ ತನ್ನ ದ್ವಿತೀಯ ಇನಿಂಗ್ಸ್ ಮುಗಿಸಿತು. ಇಂಗ್ಲೆಂಡ್ ಶನಿವಾರ ಮುನ್ನಾ ದಿನದ ಮೊತ್ತ 3 ವಿಕೆಟ್ ನಷ್ಟಕ್ಕೆ 24 ರನ್‌ನಿಂದ ತನ್ನ ದ್ವಿತೀಯ ಇನಿಂಗ್ಸನ್ನು ಮುಂದುವರಿಸಿತು. ಅದರ ಬ್ಯಾಟರ್ ಗಳು ಕ್ಷಿಪ್ರವಾಗಿ ವಿಕೆಟ್‌ಗಳನ್ನು ಕೈಚೆಲ್ಲಿದರು.
ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್‌ನ ಕೊನೆಯ ಏಳು ವಿಕೆಟ್‌ಗಳು ಕೇವಲ 46 ರನ್‌ಗಳಿಗೆ ಪತನಗೊಂಡವು.
ಅಂತಿಮವಾಗಿ ಅದು 112 ರನ್‌ಗಳಿಗೆ ತನ್ನ ದ್ವಿತೀಯ ಇನಿಂಗ್ಸ್ ಮುಗಿಸಿತು.
ಆಗ ಪಂದ್ಯವನ್ನು ಗೆಲ್ಲಲು ಪಾಕಿಸ್ತಾನಕ್ಕೆ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳನ್ನು ಗಳಿಸಬೇಕಾದ ಸುಲಭ ಗುರಿ ಎದುರಾಯಿತು. ಪಾಕಿಸ್ತಾನ ತಂಡದ ನಾಯಕ ಶಾನ್ ಮಸೂದ್ ಕೇವಲ 6 ಎಸೆತಗಳಲ್ಲಿ 23 ರನ್‌ಗಳನ್ನು ಸಿಡಿಸಿದರು. ಅವರು ಜಾಕ್ ಲೀಚ್ ಓವರ್ ನಲ್ಲಿ ಸತತ ನಾಲ್ಕು ಬೌಂಡರಿಗಳನ್ನು ಬಾರಿಸಿದರು.
ಆರಂಭಿಕ ಸಯೀಮ್ ಅಯೂಬ್ (8) ಬೇಗನೇ ಪೆವಿಲಿಯನ್‌ಗೆ ತೆರಳಿದರು.
ಪಾಕಿಸ್ತಾನವು ತನ್ನ ದ್ವಿತೀಯ ಇನಿಂಗ್ಸ್ ನಲ್ಲಿ ಕೇವಲ 3.1 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿ ಜಯಭೇರಿ ಮೊಳಗಿಸಿತು.
ಪಾಕಿಸ್ತಾನದ ಮೊದಲ ಇನಿಂಗ್ಸ್‌ನಲ್ಲಿ 134 ರನ್ ಗಳಿಸಿರುವ ಸೌದ್ ಶಕೀಲ್ ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.