ತವರು ನೆಲದಲ್ಲಿ ವಿಶ್ವಕಪ್ ಆಡುವುದು ವಿಶಿಷ್ಟ ಅನುಭವ: ವಿರಾಟ್ ಕೊಹ್ಲಿ

Update: 2023-10-20 15:03 GMT

Photo- PTI

ಹೊಸದಿಲ್ಲಿ: ಅಜೇಯ ಶತಕದ ಮೂಲಕ ಭಾರತವು ಬಾಂಗ್ಲಾದೇಶ ವಿರುದ್ಧ ಏಳು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಲು ನೆರವಾಗಿರುವ ವಿರಾಟ್ ಕೊಹ್ಲಿ, ತವರು ನೆಲದಲ್ಲಿ ವಿಶ್ವಕಪ್‌ನಲ್ಲಿ ಸ್ಪರ್ಧಿಸುತ್ತಿರುವುದು ನನಗೆ ವಿಶಿಷ್ಟ ಅನುಭವ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಗುರುವಾರ 48ನೇ ಏಕದಿನ ಶತಕವನ್ನು ಸಿಡಿಸಿರುವ ಕೊಹ್ಲಿಗೆ ಭಾರತದ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ಅವರ ಐತಿಹಾಸಿಕ ಶತಕದ ದಾಖಲೆ(49)ಸರಿಗಟ್ಟುವುದಕ್ಕೆ ಕೇವಲ ಒಂದು ಶತಕದ ಅಗತ್ಯವಿದೆ.

ಸ್ಪಿನ್ನರ್ ನಸುಮ್ ಅಹ್ಮದ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಕೊಹ್ಲಿ ಶತಕವನ್ನು ಪೂರೈಸಿದರು. ಮಾತ್ರವನ್ನು ಭಾರತವು 8 ಓವರ್‌ಗಳು ಬಾಕಿ ಇರುವಾಗಲೇ 257 ರನ್ ಗುರಿ ತಲುಪುವಲ್ಲಿಯೂ ನೆರವಾಗಿದ್ದಾರೆ.

ಕೊಹ್ಲಿ 97 ಎಸೆತಗಳನ್ನು ಎದುರಿಸಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳನ್ನು ಒಳಗೊಂಡ 103 ರನ್ ಗಳಿಸಿದರು. ಪ್ರಸಕ್ತ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 85 ರನ್ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಔಟಾಗದೆ 55 ರನ್ ಗಳಿಸಿದ ನಂತರ ಕೊಹ್ಲಿ 4 ಇನಿಂಗ್ಸ್‌ನಲ್ಲಿ ಮೂರನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ.

ನಾನು ವಿಶ್ವಕಪ್‌ನಲ್ಲಿ ಕೆಲವು ಅರ್ಧಶತಕಗಳನ್ನು ಗಳಿಸಿದ್ದೇನೆ. ಆದರೆ ಅವುಗಳನ್ನು ಶತಕವಾಗಿ ಪರಿವರ್ತಿಸಿರಲಿಲ್ಲ. ಈ ಬಾರಿ ಶತಕದೊಂದಿಗೆ ಪಂದ್ಯ ಮುಗಿಸಲು ಬಯಸಿದ್ದೆ. ಪಿಚ್ ಉತ್ತಮವಾಗಿತ್ತು. ಇದು ನನ್ನ ಆಟವನ್ನು ಆಡಲು ಅವಕಾಶ ನೀಡಿತು ಎಂದು 2011ರ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ತೆಂಡುಲ್ಕರ್‌ರೊಂದಿಗೆ ಭಾರತ ತಂಡದಲ್ಲಿ ಆಡಿದ್ದ ಕೊಹ್ಲಿ ಹೇಳಿದ್ದಾರೆ.

ಇಷ್ಟೊಂದು ಜನರ ಮುಂದೆ ತವರು ನೆಲದಲ್ಲಿ ಆಡುವುದು ಒಂದು ವಿಶಿಷ್ಟ ಅನುಭವ. ನಾವು ಎಲ್ಲ ಅವಕಾಶವನ್ನು ಬಳಸಿಕೊಳ್ಳಲು ಬಯಸುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ.

2015ರ ಆವೃತ್ತಿಯ ವಿಶ್ವಕಪ್‌ನಲ್ಲಿ ಅಡಿಲೇಡ್‌ನಲ್ಲಿ ಪಾಕಿಸ್ತಾನ ವಿರುದ್ಧ 107 ರನ್ ಗಳಿಸಿದ ನಂತರ ಮೊದಲ ಬಾರಿ ಕೊಹ್ಲಿ ವಿಶ್ವಕಪ್ ಟೂರ್ನಿಯಲ್ಲಿ ಮೂರಂಕೆಯನ್ನು ದಾಟಿದರು. ಬಾಂಗ್ಲಾ ವಿರುದ್ಧ ಶತಕ ಗಳಿಸುವ ಮೊದಲು 34ರ ಹರೆಯದ ಕೊಹ್ಲಿ ಟೂರ್ನಮೆಂಟ್‌ನಲ್ಲಿ 7 ಅರ್ಧಶತಕಗಳನ್ನು ಗಳಿಸಿದ್ದಾರೆ.

ಔಟಾಗದೆ 34 ರನ್ ಗಳಿಸಿದ್ದ ಕೆ.ಎಲ್.ರಾಹುಲ್ ಅವರು ಕೊಹ್ಲಿ ಅರ್ಧಶತಕ ಪೂರೈಸಲು ನೆರವಾದರು.

ಬಾಂಗ್ಲಾದೇಶ ವಿರುದ್ಧ ಔಟಾಗದೆ 103 ರನ್ ಗಳಿಸಿದ ಬಳಿಕ ಕೊಹ್ಲಿ ನಿರ್ಮಿಸಿದ ದಾಖಲೆಗಳು

► ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 78ನೇ ಶತಕ

► ಏಕದಿನ ಕ್ರಿಕೆಟ್‌ನಲ್ಲಿ 48ನೇ ಶತಕ

► ಮೂರನೇ ಕ್ರಮಾಂಕದಲ್ಲಿ 41ನೇ ಶತಕ

► ರನ್ ಚೇಸ್ ವೇಳೆ 27ನೇ ಶತಕ

► ಯಶಸ್ವಿ ರನ್ ಚೇಸ್ ಸಂದರ್ಭ 23ನೇ ಶತಕ

► ಭಾರತದಲ್ಲಿ 22ನೇ ಶತಕ

► 2023ರಲ್ಲಿ 4ನೇ ಶತಕ

► ವಿಶ್ವಕಪ್‌ನಲ್ಲಿ 3ನೇ ಶತಕ

► ವಿಶ್ವಕಪ್ ರನ್ ಚೇಸ್ ವೇಳೆ ಮೊದಲ ಶತಕ

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News