ಲಂಡನ್ ನಲ್ಲಿ ಫೆಡರರ್ ಕುರಿತ ಸಾಕ್ಷ್ಯಚಿತ್ರದ ಪ್ರೀಮಿಯರ್ ಪ್ರದರ್ಶನ
ಹೊಸದಿಲ್ಲಿ: ವೃತ್ತಿಪರ ಟೆನಿಸ್ ನಿಂದ ನಿವೃತ್ತಿಗೊಂಡ ಸುಮಾರು ಎರಡು ವರ್ಷಗಳ ಬಳಿಕ ರೋಜರ್ ಫೆಡರರ್ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
20 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಫೆಡರರ್ ನೂತನ ಸಾಕ್ಷ್ಯಚಿತ್ರ ‘‘ಫೆಡರರ್: ಟ್ವೆಲ್ವ್ ಫೈನಲ್ ಡೇಸ್’’ನ ಪ್ರೀಮಿಯರ್ ಪ್ರದರ್ಶನ ಇತ್ತೀಚೆಗೆ ಲಂಡನ್ ನಲ್ಲಿ ನಡೆಯಿತು. ಸಾಕ್ಷ್ಯಚಿತ್ರವು ಫೆಡರರ್ರ ಭವ್ಯ ಕ್ರೀಡಾ ಜೀವನದ ಭಾವನಾತ್ಮಕ ಅಂತ್ಯದ ಒಂದು ನೋಟವನ್ನು ನೀಡಿದೆ.
‘‘ನಾನು ಶ್ರೇಷ್ಠ ತಂದೆಯಾಗಲು ಪ್ರಯತ್ನಿಸುತ್ತಿದ್ದೇನೆ’’ ಎಂದು ಕೌಟುಂಬಿಕ ಜೀವನಕ್ಕೆ ಒತ್ತು ನೀಡುತ್ತಾ 42 ವರ್ಷದ ಟೆನಿಸ್ ಆಟಗಾರ ಹೇಳಿದರು.
ಸಾಕ್ಷ್ಯಚಿತ್ರವು ಭಾವನಾತ್ಮಕ ಅಂಶಗಳಿಗೆ ಒತ್ತು ನೀಡಿರುವ ಬಗ್ಗೆ ಫೆಡರರ್ ತೃಪ್ತಿ ವ್ಯಕ್ತಪಡಿಸಿದ್ದಾರೆ. ‘‘ಚಿತ್ರದ ಒಂದೂವರೆ ಗಂಟೆಯೂ ನಾನು ಅಳುತ್ತೇನೆ ಎಂದು ಹೇಳುವಂತಿಲ್ಲ. ಚಿತ್ರ ವೀಕ್ಷಿಸಲು ಗಟ್ಟಿತನ ಬೇಕು. ಆದರೆ, ಚಿತ್ರ ಉತ್ತಮವಾಗಿದೆ’’ ಎಂದು ಅವರು ಹೇಳುತ್ತಾರೆ.
‘‘ಬದುಕಿನಲ್ಲಿ ನಾವು ಅನುಭವಿಸುವ ಸಂಕಷ್ಟಗಳು ಮತ್ತು ಸಂಕಷ್ಟಗಳ ಎದುರು ನಾವು ಹೇಗೆ ದುರ್ಬಲರಾಗಿರುತ್ತೇವೆ ಎನ್ನುವುದು ನಮಗೆಲ್ಲರಿಗೂ ಗೊತ್ತು. ಅಭಿಮಾನಿಗಳು ಮತ್ತು ಪ್ರಸಿದ್ಧಿಯೂ ನನಗೆ ಮುಖ್ಯ’’ ಎಂದರು.
ಈ ಸಾಕ್ಷ್ಯಚಿತ್ರವು ಫೆಡರರ್ರ ವೃತ್ತಿ ಬದುಕಿನ ಪ್ರಯಾಣದ ಕೊನೆಯ 15 ದಿನಗಳನ್ನು ದಾಖಲಿಸುತ್ತದೆ. ನಿವೃತ್ತಿ ಘೋಷಣೆಗೆ ಮೊದಲಿನ ದಿನಗಳನ್ನು ಅವರು ಕಳೆದ ರೀತಿಯನ್ನು ವಿವರಿಸುತ್ತದೆ.
2022ರ ಲ್ಯಾವರ್ ಕಪ್ ವೇಳೆ ಲಂಡನ್ ನಲ್ಲಿ ಅವರು ತನ್ನ ಕ್ರೀಡಾ ಜೀವನಕ್ಕೆ ಭಾವನಾತ್ಮಕ ವಿದಾಯ ಕೋರಿದರು.
ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಆಸಿಫ್ ಕಪಾಡಿಯ ಮತ್ತು ಜೋ ಸಬಿಯ ಈ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ.