ಶೂನ್ಯದಿಂದ ವೇಗದ ಶತಕದ ತನಕ ಪ್ರಿಯಾಂಶ್ ಅಮೋಘ ಸಾಧನೆ

Update: 2025-04-10 21:38 IST
arya_priyansh

ಪ್ರಿಯಾಂಶ್ ಆರ್ಯ | PC : X \ @arya_priyansh18

  • whatsapp icon

ಹೊಸದಿಲ್ಲಿ: ಕಳೆದ ವರ್ಷದ ಆಗಸ್ಟ್‌ನಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಮ್‌ನಲ್ಲಿ ನಡೆದ ಡೆಲ್ಲಿ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಓವರ್‌ ವೊಂದರಲ್ಲಿ ಸತತ 6 ಸಿಕ್ಸರ್‌ಗಳನ್ನು ಸಿಡಿಸುವ ತನಕ ಪ್ರಿಯಾಂಶ್ ಆರ್ಯ ಹೆಸರು ಯಾರಿಗೂ ಗೊತ್ತಿರಲಿಲ್ಲ.

ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ ದಿಲ್ಲಿ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದ ಆರ್ಯ ದೇಶೀ ಕ್ರಿಕೆಟ್‌ನಲ್ಲಿ ತನ್ನ ಭರ್ಜರಿ ಫಾರ್ಮ್ ಮುಂದುವರಿಸಿದರು. 7 ಇನಿಂಗ್ಸ್‌ಗಳಲ್ಲಿ 166.91ರ ಸ್ಟ್ರೈಕ್‌ರೇಟ್‌ನಲ್ಲಿ 222 ರನ್ ಗಳಿಸಿದ ಆರ್ಯ ದಿಲ್ಲಿ ಪರ ಅಗ್ರ ಸ್ಕೋರರ್ ಎನಿಸಿಕೊಂಡರು.

ದಿಲ್ಲಿಯ ಅಶೋಕನಗರದ ನಿವಾಸಿ 24ರ ಹರೆಯದ ಆರ್ಯ 3.80 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಪಾಲಾದರು. ಈ ಮೂಲಕ ರಾತ್ರೋರಾತ್ರಿ ಕೋಟ್ಯಧಿಪತಿಯಾದರು.

ಗುಜರಾತ್ ವಿರುದ್ಧ ಕೇವಲ 23 ಎಸೆತಗಳಲ್ಲಿ 47 ರನ್ ಗಳಿಸಿದ ಆರ್ಯ ತನ್ನ ಐಪಿಎಲ್ ಪಯಣವನ್ನು ಉತ್ತಮವಾಗಿಯೇ ಆರಂಭಿಸಿದರು. ರಾಜಸ್ಥಾನ ರಾಯಲ್ಸ್ ವಿರುದ್ಧ ಶೂನ್ಯಕ್ಕೆ ಔಟಾಗುವ ಮೊದಲು ಲಕ್ನೊ ವಿರುದ್ಧ ಕೇವಲ 8 ರನ್ ಗಳಿಸಿದ್ದರು.

ಆದರೆ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಿಕೊಂಡ ಆರ್ಯ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಲ್ಲನ್‌ ಪುರದಲ್ಲಿ ಆಕರ್ಷಕ ಶತಕ ಗಳಿಸಿ ಗಮನ ಸೆಳೆದರು. ಐಪಿಎಲ್‌ ನಲ್ಲಿ ವೇಗವಾಗಿ ಶತಕ ಗಳಿಸಿದ (39 ಎಸೆತಗಳು) ಭಾರತದ 2ನೇ ಬ್ಯಾಟರ್ ಎನಿಸಿಕೊಂಡರು.

‘‘ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ ನಂತರ ದಿಲ್ಲಿಯಲ್ಲಿ ಎಲ್ಲರೂ ನನ್ನನ್ನು ಗುರುತಿಸಿದ್ದರು. ಐಪಿಎಲ್‌ ಗೆ ಸೇರಿದ ನಂತರ ಇಡೀ ದೇಶ ನನ್ನನ್ನು ಗುರುತಿಸಿದೆ. ನನ್ನ ಸಾಧನೆಗೆ ಜನರು ಅಭಿನಂದನೆ ಸಲ್ಲಿಸುತ್ತಿದ್ದಾರೆ. 6 ಸಿಕ್ಸರ್‌ಗಳು ನನ್ನ ಜೀವನವನ್ನು ಬದಲಿಸಿತು’’ ಎಂದು ಆರ್ಯ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News