ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ | ಭುವನೇಶ್ವರ ಕುಮಾರ್ ದಾಖಲೆ ಮುರಿದ ಆರ್.ಅಶ್ವಿನ್

ಭುವನೇಶ್ವರ ಕುಮಾರ್, ಆರ್.ಅಶ್ವಿನ್ | PC : X
ಹೊಸದಿಲ್ಲಿ: ಚೆನ್ನೈ ಸೂಪರ್ ಕಿಂಗ್ಸ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಭುವನೇಶ್ವರ ಕುಮಾರ್ ರ ದಾಖಲೆಯನ್ನು ಮುರಿದು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.
ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 2 ವಿಕೆಟ್ ಗಳನ್ನು ಪಡೆದಿರುವ ಅಶ್ವಿನ್ ತನ್ನ ಐಪಿಎಲ್ ವೃತ್ತಿಬದುಕಿನಲ್ಲಿ ಒಟ್ಟು 185 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಮಂಗಳವಾರ ತನ್ನ ನಾಲ್ಕು ಓವರ್ ಗಳ ಸ್ಪೆಲ್ ನಲ್ಲಿ 48 ರನ್ ಗೆ 2 ವಿಕೆಟ್ ಗಳನ್ನು ಉರುಳಿಸಿರುವ ಅಶ್ವಿನ್ ಈ ಮೈಲಿಗಲ್ಲು ತಲುಪಿದ್ದಾರೆ. ಆದರೆ ಚೆನ್ನೈ ತಂಡವು ಈ ಪಂದ್ಯವನ್ನು 18 ರನ್‌ನಿಂದ ಸೋತಿದೆ.
38ರ ಹರೆಯದ ಸ್ಪಿನ್ ಮಾಂತ್ರಿಕ ಅಶ್ವಿನ್ ಐಪಿಎಲ್ ನಲ್ಲಿ ಆಡಿರುವ 217 ಪಂದ್ಯಗಳಲ್ಲಿ 29.92ರ ಸರಾಸರಿಯಲ್ಲಿ 185 ವಿಕೆಟ್ ಗಳನ್ನು ಉರುಳಿಸಿದರು. 7.18 ಇಕಾನಮಿ ರೇಟ್ ನಲ್ಲಿ ಬೌಲಿಂಗ್ ಮಾಡಿರುವ ಅಶ್ವಿನ್ 34 ರನ್ ಗೆ 4 ವಿಕೆಟ್ ಗಳನ್ನು ಪಡೆದು ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಸ್ವಿಂಗ್ ಬೌಲಿಂಗ್ ಗೆ ಖ್ಯಾತಿ ಪಡೆದಿರುವ ಭುವನೇಶ್ವರ ಕುಮಾರ್ 179 ಪಂದ್ಯಗಳಲ್ಲಿ 184 ವಿಕೆಟ್ ಗಳನ್ನು ಪಡೆದು ಸಾರ್ವಕಾಲಿಕ ಶ್ರೇಷ್ಠ ಬೌಲರ್ ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. 35ರ ಹರೆಯದ ಅಶ್ವಿನ್ 27.28 ಸರಾಸರಿಯನ್ನು ಕಾಯ್ದುಕೊಂಡಿದ್ದು, 7.57ರ ಇಕಾನಮಿ ರೇಟ್ ಹೊಂದಿದ್ದಾರೆ. ಐಪಿಎಲ್ ನಲ್ಲಿ 19 ರನ್ ಗೆ 5 ವಿಕೆಟ್ ಗಳನ್ನು ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಪಂಜಾಬ್ ಕಿಂಗ್ಸ್ ತಂಡದ ಯಜುವೇಂದ್ರ ಚಹಾಲ್ ಹಾಗೂ ಪಿಯೂಷ್ ಚಾವ್ಲಾ ಅವರಿದ್ದಾರೆ. ಚಹಾಲ್ 22.83ರ ಸರಾಸರಿಯಲ್ಲಿ 164 ಪಂದ್ಯಗಳಲ್ಲಿ 206 ವಿಕೆಟ್ ಗಳನ್ನು ಪಡೆದಿದ್ದಾರೆ. 40ಕ್ಕೆ 5 ವಿಕೆಟ್ ಶ್ರೇಷ್ಠ ಸಾಧನೆಯಾಗಿದೆ. ಪಿಯೂಷ್ ಚಾವ್ಲಾ 192 ಪಂದ್ಯಗಳಲ್ಲಿ 26.60ರ ಸರಾಸರಿಯಲ್ಲಿ 192 ವಿಕೆಟ್ ಗಳನ್ನು ಪಡೆದಿದ್ದಾರೆ. 17 ರನ್ ಗೆ 4 ವಿಕೆಟ್ ಶ್ರೇಷ್ಠ ಬೌಲಿಂಗ್ ಆಗಿದೆ.
ಅಶ್ವಿನ್ ಮೈಲಿಗಲ್ಲು ಸಾಧಿಸಿದ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ವಿರುದ್ಧ ಜಯಶಾಲಿಯಾಗಿದೆ. ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ ತನ್ನ ಚೊಚ್ಚಲ ಐಪಿಎಲ್ ಶತಕ ಗಳಿಸಿ ಪಂಜಾಬ್ ತಂಡವು 219 ರನ್ ಗಳಿಸುವಲ್ಲಿ ನೆರವಾದರು. ಈ ಸಾಹಸಕ್ಕೆ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು.
ಈ ಫಲಿತಾಂಶದಿಂದಾಗಿ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಕೇವಲ 1ರಲ್ಲಿ ಜಯ, 4ರಲ್ಲಿ ಸೋತಿರುವ ಚೆನ್ನೈ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
►ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಗಳನ್ನು ಪಡೆದ ಬೌಲರ್ ಗಳು
ಯಜುವೇಂದ್ರ ಚಹಾಲ್-206 ವಿಕೆಟ್ ಗಳು
ಪಿಯೂಷ್ ಚಾವ್ಲಾ-192 ವಿಕೆಟ್ ಗಳು
ಆರ್.ಅಶ್ವಿನ್-185 ವಿಕೆಟ್ ಗಳು
ಭುವನೇಶ್ವರ ಕುಮಾರ್-184 ವಿಕೆಟ್ ಗಳು
ಡ್ವೇಯ್ನ್ ಬ್ರಾವೊ-183 ವಿಕೆಟ್ ಗಳು