ಫ್ರೆಂಚ್ ಓಪನ್ | ಮೊದಲ ದಿನ 14 ಬಾರಿಯ ಚಾಂಪಿಯನ್ ರಫೆಲ್ ನಡಾಲ್ ಗೆ ಗೌರವ
ರಫೆಲ್ ನಡಾಲ್ | Photo: PTI
ಪ್ಯಾರಿಸ್ : ಈ ವರ್ಷದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮೊದಲ ದಿನ ರಫೆಲ್ ನಡಾಲ್ ರನ್ನು ಗೌರವಿಸಲಾಗುತ್ತದೆ ಎಂದು ಸಂಘಟಕರು ಗುರುವಾರ ಪ್ರಕಟಿಸಿದರು.
38ರ ಹರೆಯದ ನಡಾಲ್ ಗೆದ್ದಿರುವ 22 ಗ್ರ್ಯಾನ್ಸ್ಲಾಮ್ ಟ್ರೋಫಿಗಳ ಪೈಕಿ 14 ಟ್ರೋಫಿಗಳನ್ನು ಫ್ರೆಂಚ್ ಓಪನ್ ಒಂದರಲ್ಲೇ ಗೆದ್ದುಕೊಂಡು ‘ಕ್ಲೇ ಕೋರ್ಟ್ ಕಿಂಗ್’ ಆಗಿ ಹೊರಹೊಮ್ಮಿದ್ದರು. ಕಳೆದ ವರ್ಷ ಮೊದಲ ಸುತ್ತಿನಲ್ಲಿ ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧ ಸೋಲನುಭವಿಸಿ ಟೂರ್ನಿಯಿಂದ ಬೇಗನೆ ನಿರ್ಗಮಿಸಿದ್ದರು. ಆಗ ಅವರು ಇದು ತನ್ನ ಕೊನೆಯ ಪಂದ್ಯ ಎಂದು ಘೋಷಿಸಿರಲಿಲ್ಲ.
ಆದರೆ ಸ್ಪೇನ್ ಆಟಗಾರ ನವೆಂಬರ್ ನಲ್ಲಿ ಡೇವಿಸ್ ಕಪ್ ಫೈನಲ್ಸ್ ವೇಳೆ ವೃತ್ತಿಪರ ಟೆನಿಸ್ ನಿಂದ ನಿವೃತ್ತಿಯಾಗಿದ್ದರು.
‘‘ರಫಾ ತಮ್ಮ 14 ಪ್ರಶಸ್ತಿಗಳೊಂದಿಗೆ ಟೂರ್ನಮೆಂಟ್ ಇತಿಹಾಸದಲ್ಲಿ ದಾಖಲೆ ಬರೆದಿದ್ದಾರೆ. ಬಹುಶಃ ಈ ದಾಖಲೆಗೆ ಸರಿಸಾಟಿಯೇ ಇರದು. 14 ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವ ಆಟಗಾರನಿಗೆ ಮೇ 25ರಂದು ರವಿವಾರ ಗೌರವಿಸಲಾಗುತ್ತದೆ. ದಿನದ ಮೂರು ಪಂದ್ಯಗಳು ಕೊನೆಗೊಂಡ ನಂತರ ಸಮಾರಂಭ ಏರ್ಪಡಿಸಲಾಗುವುದು. ಈ ಬಾರಿ ನಡಾಲ್ ಅವರು ಆಟಗಾರನಾಗಿರುವುದಿಲ್ಲ. 2025ರ ಆವೃತ್ತಿಯಲ್ಲಿ ಅವರು ನಮ್ಮ ತಂಡದಲ್ಲಿರುತ್ತಾರೆ’’ ಎಂದು ಪಂದ್ಯಾವಳಿಯ ನಿರ್ದೇಶಕಿ ಅಮೆಲಿ ಮೌರೆಸ್ಮೊ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ವರ್ಷದ ಫ್ರೆಂಚ್ ಓಪನ್ ಟೂರ್ನಿಯು ಮೇ 25ರಿಂದ ಜೂನ್ 8ರ ತನಕ ನಡೆಯಲಿದೆ.
ಈ ಪಂದ್ಯಾವಳಿಯಲ್ಲಿ ಮೇರಿ ಪಿಯರ್ಸ್ ಹಾಗೂ ರಿಚರ್ಡ್ ಗ್ಯಾಸ್ಕೆಟ್ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.