ಭವ್ಯ ಸಿಕ್ಸರ್ ಮೂಲಕ ಶತಕ ಪೂರ್ಣಗೊಳಿಸಿದ ರಾಹುಲ್

Update: 2023-12-27 17:55 GMT

Photo: twitter.com/BCCI

ಸೆಂಚೂರಿಯನ್ (ದಕ್ಷಿಣ ಆಫ್ರಿಕ: ಆತಿಥೇಯ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತೀಯ ಬ್ಯಾಟರ್ಗಳು ಪರದಾಡುತ್ತಿದ್ದಾಗ, ಕೆ.ಎಲ್. ರಾಹುಲ್ ತನ್ನ ಕ್ರೀಡಾ ಬದುಕಿನ ಮಹೋನ್ನತ ಇನಿಂಗ್ಸೊಂದನ್ನು ಆಡಿದರು.

ವೇಗದ ಬೌಲಿಂಗ್ಗೆ ಪೂರಕವಾಗಿರುವ ಸೆಂಚೂರಿಯನ್ನ ಕಠಿಣ ಪಿಚ್ನಲ್ಲಿ ರೋಹಿತ್ ಶರ್ಮ, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ರಂಥ ಘಟಾನುಘಟಿಗಳು ಎಡವಿದರು. ಆದರೆ ರಾಹುಲ್ ಕೆಳ-ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಮತ್ತು ಬಾಲಂಗೋಚಿಗಳೊಂದಿಗೆ ಸಣ್ಣ ಸಣ್ಣ ಭಾಗೀದಾರಿಕೆಗಳನ್ನು ನಿಭಾಯಿಸುತ್ತಾ ತನ್ನ 8ನೇ ಟೆಸ್ಟ್ ಶತಕವನ್ನು ಬಾರಿಸಿದರು. ಆ ಮೂಲಕ ಭಾರತದ ಮೊದಲ ಇನಿಂಗ್ಸ್ ಮೊತ್ತವನ್ನು ಗೌರವಾರ್ಹ ಎನ್ನಬಹುದಾದ 245 ರನ್ಗಳಿಗೆ ಒಯ್ದರು.

ಅವರು 137 ಎಸೆತಗಳಲ್ಲಿ 101 ರನ್ಗಳನ್ನು ಗಳಿಸಿದರು. ಇದರಲ್ಲಿ 14 ಬೌಂಡರಿಗಳು ಮತ್ತು 4 ಸಿಕ್ಸರ್ಗಳಿವೆ. ಆದರೂ ಇನಿಂಗ್ಸ್ ಕೊನೆಯಲ್ಲಿ ಅವರು ಎದುರಾಳಿ ಬೌಲರ್ಗಳಿಂದ ಕಠಿಣ ಸವಾಲನ್ನು ಎದುರಿಸಿದರು. ತನ್ನ ಶತಕವನ್ನು ಪೂರ್ಣಗೊಳಿಸಲು ಅವರು ಬಿಳಿ ಚೆಂಡಿನ ಕ್ರಿಕೆಟ್ನ ಕೆಲವು ಅಮೋಘ ಹೊಡೆತಗಳ ಮೊರೆಹೋಗಬೇಕಾಯಿತು. ದಕ್ಷಿಣ ಆಫ್ರಿಕದ ವೇಗಿ ನಾಂಡ್ರಿ ಬರ್ಗರ್ರ ಎಸೆತವೊಂದನ್ನು ಸಿಕ್ಸರ್ಗೆ ಅಟ್ಟುವ ಮೂಲಕ ತನ್ನ ಶತಕವನ್ನು ಪೂರ್ಣಗೊಳಿಸಿದರು.

ರಾಹುಲ್ ತನ್ನ ಶತಕವನ್ನು ಪೂರ್ಣಗೊಳಿಸುತ್ತಿರುವಂತೆಯೇ, ಇಡೀ ಭಾರತೀಯ ತಂಡವು ಎದ್ದುನಿಂತು ಅಭಿನಂದನೆ ಸಲ್ಲಿಸಿತು. ಇನಿಂಗ್ಸ್ನ ಕೊನೆಯಲ್ಲಿ ರಾಹುಲ್ ಡ್ರೆಸಿಂಗ್ ಕೋಣೆಗೆ ಮರಳುತ್ತಿದ್ದಾಗ ಮತ್ತೊಮ್ಮೆ ಎದ್ದುನಿಂತು ಚಪ್ಪಾಳೆ ತಟ್ಟಿದರು.

ಕ್ರೀಸ್ನಲ್ಲಿ ಕಳೆದ ಸಮಯದುದ್ದಕ್ಕೂ ಕೆ.ಎಲ್. ರಾಹುಲ್ ಧೀರೋದಾತ್ತ ಹೋರಾಟ ನೀಡಿದರು. ಇತರ ಬ್ಯಾಟರ್ಗಳು ಎದುರಾಳಿ ವೇಗಿ ಕಗಿಸೊ ರಬಡರನ್ನು ಎದುರಿಸಲು ಪರದಾಡಿದರೆ, ಅವರ ಎಸೆತಗಳನ್ನು ರಾಹುಲ್ ಲೀಲಾಜಾಲವಾಗಿ ನಿಭಾಯಿಸಿದರು.

ಸಚಿನ್, ಅಝರುದ್ದೀನ್ ಸಾಲಿಗೆ ಸೇರ್ಪಡೆ

ಕೆ.ಎಲ್. ರಾಹುಲ್ ತನ್ನ ಶತಕದೊಂದಿಗೆ, ದಕ್ಷಿಣ ಆಫ್ರಿಕದ ಕಠಿಣ ಪಿಚ್ಗಳಲ್ಲಿ ಶತಕಗಳನ್ನು ಬಾರಿಸಿದ ಸಚಿನ್ ತೆಂಡುಲ್ಕರ್ ಮತ್ತು ಮುಹಮ್ಮದ್ ಅಝರುದ್ದೀನ್ರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.

2010ರ ಸರಣಿಯಲ್ಲಿ ಸಚಿನ್ ತೆಂಡುಲ್ಕರ್ ಕೇಪ್ಟೌನ್ನಲ್ಲಿ ಶತಕ ಬಾರಿಸಿದ್ದರು. ಅವರು ಮಾಡಿದ 146 ರನ್ಗಳು ದಕ್ಷಿಣ ಆಫ್ರಿಕದ ಬಲಿಷ್ಠ ವೇಗದ ಬೌಲಿಂಗ್ ದಾಳಿಯ ಮೇಲೆ ಅವರು ಸಾಧಿಸಿದ್ದ ಹಿಡಿತವನ್ನು ತೋರಿಸಿದ್ದವು. ಅವರ ಶತಕದಿಂದಾಗಿ ಮೂರು ಪಂದ್ಯಗಳ ಸರಣಿಯನ್ನು ಸಮಬಲದಲ್ಲಿ ಮುಗಿಸಲು ಭಾರತಕ್ಕೆ ಸಾಧ್ಯವಾಗಿತ್ತು.

ಅದೇ ರೀತಿ, 1996-97ರ ಸರಣಿಯಲ್ಲಿ, ಮುಹಮ್ಮದ್ ಅಝರುದ್ದೀನ್ ಕೇಪ್ಟೌನ್ನಲ್ಲಿ ಭವ್ಯ ಶತಕವೊಂದನ್ನು ಬಾರಿಸಿದ್ದರು. ದಕ್ಷಿಣ ಆಫ್ರಿಕದ ಪ್ರಬಲ ಬೌಲಿಂಗ್ ದಾಳಿಯನ್ನು ಎದುರಿಸಿ ಅವರು ಮಾಡಿರುವ 115 ರನ್ಗಳು ಅವರ ನೈಪುಣ್ಯತೆಯನ್ನು ತೋರಿಸುತ್ತದೆ. ಅವರ ಶತಕದ ನೆರವಿನಿಂದ ಆ ಟೆಸ್ಟ್ನಲ್ಲಿ ಭಾರತ ಪ್ರಾಬಲ್ಯವನ್ನು ಗಳಿಸಿತು. ಅದೇ ಇನಿಂಗ್ಸ್ನಲ್ಲಿ ಸಚಿನ್ ತೆಂಡುಲ್ಕರ್ ಕೂಡ 169 ರನ್ಗಳನ್ನು ಬಾರಿಸಿದರು. ಆದರೂ, ಅಂತಿಮವಾಗಿ ಆ ಪಂದ್ಯವನ್ನು ಭಾರತ ಕಳೆದುಕೊಂಡಿತು.

ದಕ್ಷಿಣ ಆಫ್ರಿಕದಲ್ಲಿ ಟೆಸ್ಟ್ ಶತಕವೊಂದನ್ನು ಬಾರಿಸಿದ ಎರಡನೇ ಭಾರತೀಯ ವಿಕೆಟ್ಕೀಪರ್ ಕೆ.ಎಲ್. ರಾಹುಲ್ ಆದರು. ಅದಕ್ಕೂ ಮೊದಲು ರಿಶಭ್ ಪಂತ್ ದಕ್ಷಿಣ ಆಫ್ರಿಕದಲ್ಲಿ ಟೆಸ್ಟ್ ಶತಕ ಬಾರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News