BCCI ನೀಡಿದ ಹೆಚ್ಚುವರಿ 2.5 ಕೋಟಿ ರೂ. ಬೋನಸ್ ತಿರಸ್ಕರಿಸಿದ ರಾಹುಲ್ ದ್ರಾವಿಡ್; ಕಾರಣವೇನು ಗೊತ್ತೇ?

Update: 2024-07-10 07:23 GMT

Photo: PTI

ಮುಂಬೈ: ಬಾರ್ಬಡೋಸ್‍ನಲ್ಲಿ ಇತ್ತೀಚೆಗೆ ಭಾರತ ತಂಡ ಟಿ20 ವಿಶ್ವಕಪ್ ಗೆದ್ದ ಹಿನ್ನೆಲೆಯಲ್ಲಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ನೀಡಿದ 2.5 ಕೋಟಿ ರೂಪಾಯಿ ಹೆಚ್ಚುವರಿ ಬೋನಸ್ ತಿರಸ್ಕರಿಸುವ ಮೂಲಕ ಕನ್ನಡಿಗ ಕೋಚ್ ತಮ್ಮ ನಮ್ರತೆಯನ್ನು ಪ್ರದರ್ಶಿಸಿದ್ದಾರೆ. 

ತಂಡದ ಎಲ್ಲ ಸದಸ್ಯರಿಗೆ ಮತ್ತು ಬೆಂಬಲ ಸಿಬ್ಬಂದಿಗೆ ಸಮಾನ ಬೋನಸ್ ಬಹುಮಾನವನ್ನು ಖಾತರಿಪಡಿಸಿದ ದ್ರಾವಿಡ್ ತಾವು ಮಾತ್ರ ಈ ಹೆಚ್ಚುವರಿ ಬೋನಸ್ ಪಡೆಯಲು ನಿರಾಕರಿಸಿದ್ದಾರೆ.

ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ಸದಸ್ಯರಿಗೆ ಮತ್ತು ಬೆಂಬಲ ಸಿಬ್ಬಂದಿಗೆ ಬಿಸಿಸಿಐ 125 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿತ್ತು. ರಾಹುಲ್ ದ್ರಾವಿಡ್ ಹಾಗೂ ಎಲ್ಲ ಆಟಗಾರರಿಗೆ ತಲಾ 5 ಕೋಟಿ ರೂಪಾಯಿ ಬಹುಮಾನ ನೀಡಿದರೆ, ಇತರ ಬೆಂಬಲ ಸಿಬ್ಬಂದಿ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪರಾಸ್ ಮಹಾಂಬ್ರೆ, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅವರಿಗೆ 2.5 ಕೋಟಿ ರೂಪಾಯಿ ಬೋನಸ್ ನೀಡಲು ನಿರ್ಧರಿಸಲಾಗಿತ್ತು. ಆದರೆ ತಾವು ಕೂಡಾ ಕೇವಲ 2.5 ಕೋಟಿ ರೂಪಾಯಿ ಬೋನಸ್ ಪಡೆಯುವುದಾಗಿ ರಾಹುಲ್ ದ್ರಾವಿಡ್, ಮಂಡಳಿಗೆ ತಿಳಿಸಿದ್ದಾರೆ.

ತಂಡದ ಎಲ್ಲ 15 ಮಂದಿ ಆಟಗಾರರಿಗೆ ತಲಾ 5 ಕೋಟಿ ರೂಪಾಯಿ ನೀಡಲಾಗಿದ್ದು, ಬೆಂಬಲ ಸಿಬ್ಬಂದಿಗೆ ತಲಾ 2.5 ಕೋಟಿ, ಆಯ್ಕೆಗಾರರು ಮತ್ತು ಪ್ರಯಾಣಕ್ಕೆ ಮೀಸಲು ಇಡಲಾದ ಆಟಗಾರರಿಗೆ ತಲಾ ಒಂದು ಕೋಟಿ ರೂಪಾಯಿ ನೀಡಲಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಅಧ್ಯಕ್ಷ ರೋಜರ್ ಬಿನ್ನಿ ಅವರು ಜುಲೈ 4ರಂದು ಮುಂಬೈನಲ್ಲಿ ನಡೆದ ವಿಜಯಯಾತ್ರೆಯ ಬಳಿಕ ಈ ಘೋಷಣೆ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News