ವಿಶ್ವಕಪ್ ಫೈನಲ್ ಸೋಲಿಗೆ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಕಾರಣ ಎಂದ ರಾಹುಲ್ ದ್ರಾವಿಡ್
ಮುಂಬೈ, ಡಿ.3: ಕ್ರಿಕೆಟ್ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ 11 ದಿನಗಳ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧಿಕಾರಿಗಳು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ತಂಡದ ಕಪ್ತಾನ ರೋಹಿತ್ ಶರ್ಮಾ ಜತೆ ಚರ್ಚಿಸಿ, ಟೂರ್ನಿಯಲ್ಲಿ ಭಾರತದ ಸಾಧನೆಯ ಪರಾಮರ್ಶೆ ನಡೆಸಿದರು. ಸದ್ಯ ವಿಶ್ರಾಂತಿಗಾಗಿ ಲಂಡನ್ಗೆ ತೆರಳಿರುವ ರೋಹಿತ್ ಶರ್ಮಾ ವಿಡಿಯೊ ಕಾಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಕೋಶಾಧ್ಯಕ್ಷ ಆಶೀಶ್ ಶೆಲರ್ ಸಭೆಯಲ್ಲಿ ಪಾಲ್ಗೊಂಡಿದ್ದು, ಅಮೋಘ 10 ಗೆಲುವುಗಳ ಬಳಿಕ ಫೈನಲ್ ಪಂದ್ಯದಲ್ಲಿ ಭಾರತದ ಸಾಧಾರಣ ಪ್ರದರ್ಶನದ ಬಗ್ಗೆ ಕೋಚ್ ನಿಂದ ವಿವರಣೆ ಕೇಳಿದರು ಎಂದು 'ದೈನಿಕ್ ಜಾಗರಣ್' ವರದಿ ಮಾಡಿದೆ.
ಈ ಬಗ್ಗೆ ವಿವರಣೆ ನೀಡಿದ ಕೋಚ್ ರಾಹುಲ್ ದ್ರಾವಿಡ್, ಭಾರತ ತಂಡದ ಸೋಲಿಗೆ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಕಾರಣ. ಆ ಪಿಚ್ ಭಾರತೀಯ ಕ್ರಿಕೆಟ್ ಮ್ಯಾನೇಜ್ ಮೆಂಟ್ ನಿರೀಕ್ಷಿಸಿದಷ್ಟು ತಿರುವು ಪಡೆಯಲಿಲ್ಲ. ಇದು ನಮ್ಮ ತಂಡದ ಸೋಲಿಗೆ ಪ್ರಮಖ ಕಾರಣಗಳಲ್ಲಿ ಒಂದಾಗಿತ್ತು ಎಂದು ಹೇಳಿರುವುದಾಗಿ ವರದಿಯಾಗಿದೆ.
ಸಭೆಯಲ್ಲಿ ದಕ್ಷಿಣ ಆಫ್ರಿಕಾಗೆ ತೆರಳುವ ಭಾರತೀಯ ಏಕದಿನ, ಟಿ20 ಹಾಗೂ ಟೆಸ್ಟ್ ತಂಡಗಳ ಆಯ್ಕೆ ವಿಚಾರವೂ ಸಭೆಯ ಮತ್ತೊಂದು ಪ್ರಮುಖ ಕಾರ್ಯಸೂಚಿಯಾಗಿತ್ತು. ಜತೆಗೆ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚೆ ನಡೆಯಿತು.
ವಿಶ್ವಕಪ್ ಪಂದ್ಯಾವಳಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ಸತತ 10 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್ ಗೆ ಏರಿತ್ತು. ಆದರೆ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಲಕ್ಷಾಂತರ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್ ಗಳಿಂದ ಸೋಲನುಭವಿಸಿತ್ತು. ಭಾರತ ಗಳಿಸಿದ 240 ರನ್ ಗಳ ಸಾಧಾರಣ ಮೊತ್ತವನ್ನು 43 ಓವರ್ ಗಳಲ್ಲಿ ಬೆನ್ನಟ್ಟಿದ್ದ ಆಸಿಸ್ ತಂಡ 5ನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು.