ಮ್ಯಾಚ್ ಫಿಕ್ಸಿಂಗ್ ಆರೋಪ ತಳ್ಳಿ ಹಾಕಿದ ರಾಜಸ್ಥಾನ ರಾಯಲ್ಸ್

PC : ipl.com
ಜೈಪುರ: ರಾಜಸ್ಥಾನ ರಾಯಲ್ಸ್ ತಂಡ ಸವಾಲಿನ ಸಮಯ ಎದುರಿಸುತ್ತಿದ್ದು, ಜೈಪುರ ಮೂಲದ ತಂಡವು ಇದೀಗ ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ಎದುರಿಸುತ್ತಿದೆ. ಕಳೆದ ಶನಿವಾರ ಸವಾಯಿ ಮಾನ್ ಸಿಂಗ್ ಸ್ಟೇಡಿಯಮ್ನಲ್ಲಿ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ರಾಯಲ್ಸ್ ಕೇವಲ 2 ರನ್ನಿಂದ ಸೋತ ನಂತರ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ತಾತ್ಕಾಲಿಕ ಸಮಿತಿಯ ಸಂಚಾಲಕ ಹಾಗೂ ಬಿಜೆಪಿ ಶಾಸಕ ಜೈದೀಪ್ ಬಿಹಾನಿ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದಾರೆ.
ಆರು ವಿಕೆಟ್ ಕೈಯಲ್ಲಿದ್ದರೂ ಕೊನೆಯ ಓವರ್ನಲ್ಲಿ 9 ರನ್ ಗಳಿಸುವಲ್ಲಿ ತಂಡವು ಅಸಮರ್ಥವಾಗಿರುವುದನ್ನು ಬಿಹಾನಿ ಪ್ರಶ್ನಿಸಿದ್ದಾರೆ. ಸೋಲಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ಬಿಹಾನಿ, ಬಿಸಿಸಿಐ ಹಾಗೂ ಇತರ ಏಜೆನ್ಸಿಗಳಿಂದ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
‘‘ನಾನು ಪೊಲೀಸ್ ದೂರನ್ನು ದಾಖಲಿಸಿಲ್ಲ. ನಾನು ಮಾಧ್ಯಮದೊಂದಿಗೆ ಮಾತನಾಡಿದ್ದು, ಇದೀಗ ಈ ವಿಚಾರದ ಬಗ್ಗೆ ತನಿಖೆ ನಡೆಸುವುದು ಬಿಸಿಸಿಐಗೆ ಬಿಟ್ಟ ವಿಚಾರವಾಗಿದೆ’’ಎಂದು ಬಿಹಾನಿ ಹೇಳಿದ್ದಾರೆ.
ರಾಜಸ್ಥಾನ ರಾಯಲ್ಸ್ ಉಪಾಧ್ಯಕ್ಷ ರಾಜೀವ್ ಖನ್ನಾ ಈ ಎಲ್ಲ ಆರೋಪವನ್ನು ತಿರಸ್ಕರಿಸಿದ್ದಾರೆ.
‘‘ಆರ್ಸಿಎ ಅಡ್ ಹಾಕ್ ಸಂಚಾಲಕರ ಹೇಳಿಕೆಯಲ್ಲಿ ಸ್ವಲ್ಪವೂ ಹುರುಳಿಲ್ಲ. ಇದು ಖಂಡನೀಯ. ರಾಜಸ್ಥಾನ ಸ್ಪೋರ್ಟ್ಸ್ ಕೌನ್ಸಿಲ್ ಗೆ(ಆರ್ಎಸ್ಎಸ್ಸಿ)ರಾಯಲ್ಸ್ ಅಧಿಕೃತವಾಗಿ ದೂರು ಸಲ್ಲಿಸಿದೆ. ರಾಜ್ಯ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಹಾಗೂ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ಗೂ ಕೂಡ ತಿಳಿಸಲಾಗಿದೆ. ಶಾಸಕರೊಬ್ಬರಿಂದ ಈ ರೀತಿಯ ಹುರುಳಿಲ್ಲದ ಆರೋಪವು ನೋವುಂಟು ಮಾಡಿದ್ದು, ಇದು ಪಂದ್ಯ ಗೆಲ್ಲಲು ಎಲ್ಲ ಪ್ರಯತ್ನ ನಡೆಸುತ್ತಿರುವ ಆಟಗಾರರನ್ನು ನಿರುತ್ಸಾಹಗೊಳಿಸುತ್ತದೆ’’ಎಂದು ರಾಜೀವ್ ಖನ್ನಾ ಹೇಳಿದ್ದಾರೆ.