ರಣಜಿ: ಗುರುವಾರ ಕರ್ನಾಟಕ ತಂಡಕ್ಕೆ ನಿರ್ಣಾಯಕ ಪಂದ್ಯ, ಹರ್ಯಾಣ ಎದುರಾಳಿ

Update: 2025-01-29 21:13 IST
ರಣಜಿ: ಗುರುವಾರ ಕರ್ನಾಟಕ ತಂಡಕ್ಕೆ ನಿರ್ಣಾಯಕ ಪಂದ್ಯ, ಹರ್ಯಾಣ ಎದುರಾಳಿ

Photo Credit | X/@TOI Sports

  • whatsapp icon

ಬೆಂಗಳೂರು: ಕರ್ನಾಟಕ ತಂಡವು ಗುರುವಾರದಿಂದ ಬಲಿಷ್ಠ ತಂಡ ಹರ್ಯಾಣದ ವಿರುದ್ಧ ಸಿ ಗುಂಪಿನ ಕೊನೆಯ ಹಾಗೂ ನಿರ್ಣಾಯಕ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಹಾಗೂ ವಿದ್ವತ್ ಕಾವೇರಪ್ಪ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

ರಾಹುಲ್ 2020ರ ಫೆಬ್ರವರಿಯಲ್ಲಿ ಕೊನೆಯ ಬಾರಿ ರಣಜಿ ಪಂದ್ಯವನ್ನು ಆಡಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯ ವಿರುದ್ಧ ಎಲ್ಲ 5 ಟೆಸ್ಟ್ ಪಂದ್ಯಗಳನ್ನು ಆಡಿರುವ ರಾಹುಲ್ ಕರ್ನಾಟಕ ತಂಡದ ಬ್ಯಾಟಿಂಗ್ ಆರಂಭಿಸುವ ಸಾಧ್ಯತೆಯಿದೆ.

ಸ್ಥಿರ ಪ್ರದರ್ಶನದಿಂದ ಗಮನ ಸೆಳೆದಿರುವ ಕಾವೇರಪ್ಪ ಅವರು ಗಾಯದಿಂದ ಚೇತರಿಸಿಕೊಂಡು ವಾಪಸಾಗುತ್ತಿದ್ದಾರೆ. ಕಾವೇರಪ್ಪ ಅವರು ಪ್ರಸಿದ್ಧ್ದ ಕೃಷ್ಣ , ವಿ.ಕೌಶಿಕ್, ಅಭಿಲಾಶ್ ಶೆಟ್ಟಿ ಹಾಗೂ ಯಶೋವರ್ಧನ್ ಅವರನ್ನೊಳಗೊಂಡ ಕರ್ನಾಟಕದ ವೇಗದ ಬೌಲಿಂಗ್ ಸರದಿಗೆ ಸೇರ್ಪಡೆಯಾಗಲಿದ್ದಾರೆ. ಗಾಯದ ಸಮಸ್ಯೆಯ ಕಾರಣಕ್ಕೆ ವೈ. ವೈಶಾಕ್ ಈ ಪಂದ್ಯಕ್ಕೆ ಲಭ್ಯ ಇರುವುದಿಲ್ಲ.

ರಾಹುಲ್ ಅವರು ಮಂಗಳವಾರ ಕೆಎಸ್‌ಸಿಎ ಮೈದಾನದಲ್ಲಿ ಬ್ಯಾಟಿಂಗ್ ನಡೆಸಿದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರಧಾನ ಮೈದಾನದಲ್ಲಿ ಕ್ಯಾಚಿಂಗ್ ಅಭ್ಯಾಸ ನಡೆಸಿದರು. ಕಾವೇರಪ್ಪ ನೆಟ್‌ ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದರು.

ಪಂಜಾಬ್ ವಿರುದ್ಧ ಹಿಂದಿನ ಪಂದ್ಯದಲ್ಲಿ ಇನಿಂಗ್ಸ್ ಅಂತರದಿಂದ ಜಯ ಸಾಧಿಸಿ ರಣಜಿ ನಾಕೌಟ್ ಹಂತಕ್ಕೇರುವ ವಿಶ್ವಾಸವನ್ನು ಜೀವಂತವಾಗಿರಿಸಿಕೊಂಡಿರುವ ಕರ್ನಾಟಕ ತಂಡ ಹರ್ಯಾಣ ತಂಡ ವಿರುದ್ಧ ಗೆಲ್ಲುವುದು ಅಷ್ಟೊಂದು ಸುಲಭವಿಲ್ಲ.

ಟೂರ್ನಿಯ ಆರಂಭದಲ್ಲಿ ಕಳಪೆ ವಾತಾವರಣ ಹಾಗೂ ಆನಂತರ ಬಂಗಾಳ ತಂಡದ ವಿರುದ್ಧ ನೀರಸ ಪ್ರದರ್ಶನ ನೀಡಿದ ನಂತರ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಮುಂದಿನ ಸುತ್ತಿಗೇರುವ ಅವಕಾಶ ಕ್ಷೀಣಗೊಂಡಿತ್ತು.

ಈ ತಿಂಗಳಾರಂಭದಲ್ಲಿ ದಾಖಲೆಯ 5ನೇ ವಿಜಯ್ ಹಝಾರೆ ಟ್ರೋಫಿ ಜಯಿಸಿದ ಮಯಾಂಕ್ ಬಳಗವು ಬೆಂಗಳೂರಿನಲ್ಲಿ ಕಳೆದ ವಾರಾಂತ್ಯದಲ್ಲಿ ಪಂಜಾಬ್ ತಂಡವನ್ನು ಮಣಿಸಿ 19 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತ್ತು. ಗುರುವಾರ ಸಿ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿರುವ ಹರ್ಯಾಣ(26 ಅಂಕ)ತಂಡದಿಂದ ತೀವ್ರ ಸ್ಪರ್ಧೆ ಎದುರಿಸುವ ಸಾಧ್ಯತೆಯಿದೆ. ಕೇರಳ(21 ಅಂಕ)2ನೇ ಸ್ಥಾನದಲ್ಲಿರುವ ಕಾರಣ ಕರ್ನಾಟಕ ತಂಡವು ಬೋನಸ್ ಅಂಕದೊಂದಿಗೆ ಜಯ ಸಾಧಿಸಿದರೆ, ರಣಜಿಯಲ್ಲಿ ಸ್ಪರ್ಧೆಯಲ್ಲಿ ಉಳಿಯಬಹುದು.

ಕರ್ನಾಟಕ ಸಾಧಾರಣ ಗೆಲುವು(6 ಅಂಕ)ಪಡೆದರೂ ಮುಂದಿನ ಸುತ್ತಿಗೇರಬಹುದು. ಆದರೆ, ಕೇರಳ ತಂಡವು ಬಿಹಾರ ವಿರುದ್ಧದ ಪಂದ್ಯದಲ್ಲಿ 3 ಕ್ಕಿಂತ ಹೆಚ್ಚು ಅಂಕ ಗಳಿಸಬಾರದು. 6 ಪಂದ್ಯಗಳಲ್ಲಿ ಕೇವಲ 1 ಅಂಕ ಗಳಿಸಿರುವ ಬಿಹಾರ ತಂಡವು ಕೇರಳಕ್ಕೆ ಸುಲಭ ತುತ್ತಾಗುವ ಸಾಧ್ಯತೆಯಿದೆ. ಹೀಗಾಗಿ ಕರ್ನಾಟಕ ನಾಕೌಟ್ ಹಂತಕ್ಕೇರುವುದು ಸುಲಭ ಸಾಧ್ಯವಲ್ಲ.

ಹರ್ಯಾಣ ತಂಡ ಕರ್ನಾಟಕವನ್ನು ಸೋಲಿಸಿ ನಾಕೌಟ್ ಹಂತಕ್ಕೇರಲು ತುದಿಗಾಲಲ್ಲಿ ನಿಂತಿದೆ. ಹಿಮಾಂಶು ರಾಣಾ(419 ರನ್), ಅಂಕಿತ್ ಕುಮಾರ್(309),ಧೀರೂ ಸಿಂಗ್(291 ರನ್) ಹಾಗೂ ಲಕ್ಷ್ಯ ದಲಾಲ್(256)ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅದೇ ರೀತಿ ಬೌಲಿಂಗ್‌ ನಲ್ಲಿ ಜಯಂತ್ ಯಾದವ್ ಒಟ್ಟು 23 ವಿಕೆಟ್‌ಗಳನ್ನು ಪಡೆದಿದ್ದು, ಅನುಜ್ ಥಕ್ರಾಲ್(10)ಉತ್ತಮ ಪ್ರದರ್ಶನ ನೀಡಿದ್ದಾರೆ.

ತನ್ನ ಹಳೆಯ ಸಹ ಆಟಗಾರ ರಾಹುಲ್ ಮರಳಿಕೆಗೆ ಸಂಭ್ರಮ ವ್ಯಕ್ತಪಡಿಸಿದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್, ನಾನು ಕೆ.ಎಲ್.(ರಾಹುಲ್)ಅವರೊಂದಿಗೆ ಆಡಲು ನಿಜವಾಗಿಯೂ ಆನಂದಿಸುವೆ. ಅವರು ಉತ್ತಮ ಪ್ರದರ್ಶನ ನೀಡಿ, ತಂಡಕ್ಕೆ ಶಕ್ತಿ ತುಂಬಲಿದ್ದಾರೆ ಎನ್ನುವುದರಲ್ಲಿ ನನಗೆ ಸ್ವಲ್ಪವೂ ಅನುಮಾನವಿಲ್ಲ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News