ರಣಜಿ | ಹರ್ಯಾಣದ ವಿರುದ್ಧ ಕರ್ನಾಟಕ 267/5

ಮಯಾಂಕ್ ಅಗರ್ವಾಲ್ | PC : PTI
ಬೆಂಗಳೂರು: ನಾಯಕ ಮಯಾಂಕ್ ಅಗರ್ವಾಲ್‌ರ ಅರ್ಧಶತಕದ(91 ರನ್, 149 ಎಸೆತ, 8 ಬೌಂಡರಿ, 3 ಸಿಕ್ಸರ್)ಕೊಡುಗೆಯ ಹೊರತಾಗಿಯೂ ಕರ್ನಾಟಕ ಕ್ರಿಕೆಟ್ ತಂಡ ಹರ್ಯಾಣದ ವಿರುದ್ಧ ಗುರುವಾರ ಆರಂಭವಾದ ರಣಜಿ ಟ್ರೋಫಿ ಸಿ ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಸಾಧಾರಣ ಆರಂಭ ಪಡೆದಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿರುವ ಕರ್ನಾಟಕ ತಂಡವು 89 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 267 ರನ್ ಗಳಿಸಿದೆ. ಅನ್ಶುಲ್ ಕಾಂಬೋಜ್(2-25)ಹಾಗೂ ಅನುಜ್ ಥಕ್ರಲ್(2-74)ತಲಾ ಎರಡು ವಿಕೆಟ್‌ಗಳನ್ನು ಪಡೆದು ಕರ್ನಾಟಕ ತಂಡವನ್ನು ಕಾಡಿದ್ದಾರೆ.
ಇನಿಂಗ್ಸ್ ಆರಂಭಿಸಿದ ಅನೀಶ್(17 ರನ್)ಹಾಗೂ ಮಯಾಂಕ್ ಮೊದಲ ವಿಕೆಟ್‌ಗೆ 46 ರನ್ ಸೇರಿಸಿದರು. ಈಜೋಡಿಯನ್ನು ಕಾಂಬೋಜ್ ಬೇರ್ಪಡಿಸಿದರು.
26 ರನ್ ಗಳಿಸಿದ ಕೆ.ಎಲ್.ರಾಹುಲ್: ಅನೀಶ್ ಔಟಾದ ನಂತರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೆ.ಎಲ್.ರಾಹುಲ್ 37 ಎಸೆತಗಳಲ್ಲಿ 26 ರನ್ ಗಳಿಸಿ ವೇಗದ ಬೌಲರ್ ಅನ್ಶುಲ್ ಕಾಂಬೋಜ್‌ಗೆ ವಿಕೆಟ್ ಒಪ್ಪಿಸಿದರು. ಔಟಾಗುವ ಮೊದಲು ನಾಯಕ ಮಯಾಂಕ್ ಅಗರ್ವಾಲ್ ಜೊತೆಗೆ 2ನೇ ವಿಕೆಟ್‌ಗೆ 54 ರನ್ ಜೊತೆಯಾಟ ನಡೆಸಿದರು.
ರಾಹುಲ್ 2020ರ ನಂತರ ಮೊದಲ ಬಾರಿ ರಣಜಿ ಪಂದ್ಯವನ್ನು ಆಡಿದರು. ಮೊಣಕೈ ಗಾಯದಿಂದಾಗಿ ಪಂಜಾಬ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಅವರು ಆಡಿರಲಿಲ್ಲ. ಮಯಾಂಕ್ ಕೇವಲ 9 ರನ್‌ನಿಂದ ಶತಕ ವಂಚಿತರಾದರು.
ದೇವದತ್ ಪಡಿಕ್ಕಲ್(43 ರನ್) ಹಾಗೂ ಆರ್.ಸ್ಮರಣ್ (35 ರನ್) ವಿಕೆಟ್‌ಗಳನ್ನು ಬೆನ್ನಿಬೆನ್ನಿಗೆ ಕಳೆದುಕೊಂಡಿರುವ ಕರ್ನಾಟಕ ತಂಡ ಹಿನ್ನಡೆ ಕಂಡಿತು. ಈ ಇಬ್ಬರು ಬ್ಯಾಟರ್‌ಗಳು ಸತತ ಓವರ್‌ಗಳಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಬೋನಸ್ ಅಂಕದೊಂದಿಗೆ ಜಯ ಸಾಧಿಸಿ ಮುಂದಿನ ಸುತ್ತಿಗೇರುವ ವಿಶ್ವಾಸದಲ್ಲಿರುವ ಕರ್ನಾಟಕ ತಂಡ ಇದೀಗ ಕೆ.ಎಲ್.ಶ್ರೀಜಿತ್(ಔಟಾಗದೆ 18 ರನ್) ಹಾಗೂ ಯಶೋವರ್ಧನ್(ಔಟಾಗದೆ 27)ಅವರನ್ನು ಅವಲಂಬಿಸಿದೆ. ಯಶೋವರ್ಧನ್‌ಗೆ ಕೇವಲ 3 ಪ್ರಥಮ ದರ್ಜೆ ಪಂದ್ಯ ಆಡಿದ ಅನುಭವವಿದೆ.