ಮಿಂಚಿದ ರಶೀದ್ ಖಾನ್ | ಝಿಂಬಾಬ್ವೆ ವಿರುದ್ಧ ಟೆಸ್ಟ್ ಸರಣಿ ಗೆದ್ದ ಅಫ್ಘಾನಿಸ್ತಾನ
ಬುಲಾವಯೊ: ಝಿಂಬಾಬ್ವೆ ತಂಡದ ವಿರುದ್ಧ ಸೋಮವಾರ 72 ರನ್ನಿಂದ ಸುಲಭವಾಗಿ ಜಯ ಸಾಧಿಸಿರುವ ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.
ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, 2ನೇ ಇನಿಂಗ್ಸ್ನಲ್ಲಿ ತನ್ನ 7ನೇ ವಿಕೆಟ್ ಉರುಳಿಸಿ ಗೆಲುವಿನ ಮುದ್ರೆಯೊತ್ತಿದರು.
ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಗೆಲ್ಲಲು 278 ರನ್ ಗುರಿ ಪಡೆದಿದ್ದ ಝಿಂಬಾಬ್ವೆ ತಂಡ ಕೊನೆಯ ದಿನವಾದ ಸೋಮವಾರ 8 ವಿಕೆಟ್ಗಳ ನಷ್ಟಕ್ಕೆ 205 ರನ್ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿತು. ಗೆಲ್ಲಲು 73 ರನ್ ಅಗತ್ಯವಿತ್ತು. ನಾಯಕ ಕ್ರೆಗ್ ಎರ್ವಿನ್ ಔಟಾಗದೆ 53 ರನ್ ಗಳಿಸಿದ್ದರು.
ಆತಿಥೇಯ ತಂಡವು ನಿನ್ನೆಯ ಮೊತ್ತಕ್ಕೆ ಒಂದೂ ರನ್ ಸೇರಿಸದೆ ಎರಡೂ ವಿಕೆಟ್ಗಳನ್ನು ಕಳೆದುಕೊಂಡು ಗೆಲುವನ್ನು ಕೈಚೆಲ್ಲಿತು. ನಾಲ್ಕು ವರ್ಷಗಳ ನಂತರ ಝಿಂಬಾಬ್ವೆ ವಿರುದ್ಧ ಜಯ ಗಳಿಸಲು ಅಫ್ಘಾನಿಸ್ತಾನ ತಂಡಕ್ಕೆ ಕೇವಲ 15 ಎಸೆತಗಳು ಬೇಕಾದವು.
ರಿಚರ್ಡ್ ಗರಾವಾ 3 ರನ್ಗೆ ರನೌಟಾದಾಗ ಝಿಂಬಾಬ್ವೆ ತಂಡದ ಸಮಸ್ಯೆ ಬಿಗಡಾಯಿತು. ಎರ್ವಿನ್ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ರಶೀದ್ ಖಾನ್(7-66) ಅಫ್ಘಾನಿಸ್ತಾನಕ್ಕೆ ಸೋಲಿನ ಬರೆ ಎಳೆದರು.
ಝಿಂಬಾಬ್ವೆ ತಂಡದ 2ನೇ ಇನಿಂಗ್ಸ್ನಲ್ಲಿ ಎರ್ವಿನ್(53 ರನ್, 103 ಎಸೆತ, 4 ಬೌಂಡರಿ, 1 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು.
ಮಳೆ ಬಾಧಿತ ಪಂದ್ಯದುದ್ದಕ್ಕೂ ರಶೀದ್ ಖಾನ್ ಅತ್ಯುತ್ತಮ ಪ್ರದರ್ಶನ ನೀಡಿದರು. ಖಾನ್ ಅವರು ಝಿಂಬಾಬ್ವೆಯ ಮೊದಲ ಇನಿಂಗ್ಸ್ನಲ್ಲಿ 94 ರನ್ಗೆ 4 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಸ್ವತಃ ಶ್ರೇಷ್ಠ ಪ್ರದರ್ಶನ ನೀಡಿದರೂ ತಂಡದ ಸಹ ಆಟಗಾರರನ್ನು ರಶೀದ್ ಖಾನ್ ಪ್ರಶಂಸಿಸಿದರು.
ಅಫ್ಘಾನಿಸ್ತಾನದ ಎರಡನೇ ಇನಿಂಗ್ಸ್ನಲ್ಲಿ ಶತಕಗಳನ್ನು ಗಳಿಸಿದ್ದ ರಹಮತ್ ಶಾ ಹಾಗೂ ಇಸ್ಮತ್ ಆಲಂರ ಕೊಡುಗೆಗಳನ್ನು ರಶೀದ್ ಕೊಂಡಾಡಿದರು.
ಅಫ್ಘಾನಿಸ್ತಾನ ತಂಡ ಮೊದಲ ಇನಿಂಗ್ಸ್ ನಲ್ಲಿ 86 ರನ್ನಿಂದ ಹಿನ್ನಡೆ ಕಂಡ ನಂತರ ಇಸ್ಮತ್ ಆಲಂ 2ನೇ ಇನಿಂಗ್ಸ್ ನಲ್ಲಿ ಶತಕ ಗಳಿಸಿ ಪ್ರತಿರೋಧ ಒಡ್ಡಿರುವುದನ್ನು ಶ್ಲಾಘಿಸಿದರು.
ತನ್ನ ವೈಯಕ್ತಿಕ ಪ್ರದರ್ಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಖಾನ್, ನಾನು ಬೆನ್ನಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದೇನೆ. ಪಂದ್ಯದಲ್ಲಿ ಒಟ್ಟು 11 ವಿಕೆಟ್ಗಳನ್ನು ಪಡೆದಿರುವುದು ಉತ್ತೇಜನಕಾರಿ ಅಂಶವಾಗಿದೆ. ಆರಂಭದಲ್ಲಿ ಬೌಲರ್ ಗಳು ಆ ನಂತರ ಬ್ಯಾಟರ್ ಗಳಿಗೆ ಫೇವರಿಟ್ ಆಗಿದ್ದ ಪಿಚ್ ಗೆ ಹೊಂದಿಕೊಳ್ಳುವುದು ಮುಖ್ಯವಾಗಿತ್ತು ಎಂದು ಹೇಳಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 157 ರನ್ ಗಳಿಸಿದ್ದು, ರಶೀದ್ ಖಾನ್(25 ರನ್)ಅಗ್ರ ಸ್ಕೋರರ್ ಎನಿಸಿಕೊಂಡಿದ್ದಾರೆ. ಸಿಕಂದರ್ ರಝಾ(3-30) ಹಾಗೂ ಬ್ಲೆಸ್ಸಿಂಗ್ ಮುಝರ್ಬಾನಿ(3-42) ಝಿಂಬಾಬ್ವೆ ತಂಡದ ಪರ ತಲಾ 3 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಝಿಂಬಾಬ್ವೆ ತನ್ನ ಮೊದಲ ಇನಿಂಗ್ಸ್ನಲ್ಲಿ 243 ರನ್ ಗಳಿಸಿತ್ತು. ಕ್ರೆಗ್ ಎರ್ವಿನ್(75 ರನ್), ಸಿಕಂದರ್ ರಝಾ(61 ರನ್) ಹಾಗೂ ಸೀನ್ ವಿಲಿಯಮ್ಸ್(49 ರನ್)ಬ್ಯಾಟಿಂಗ್ನಲ್ಲಿ ಪ್ರಮುಖ ಕೊಡುಗೆ ನೀಡಿದರು. ಅಫ್ಫಾನ್ ಪರ ರಶೀದ್ ಖಾನ್ 3 ವಿಕೆಟ್ಗಳನ್ನು ಪಡೆದರೆ, ಯಾಮಿನ್ ಅಹ್ಮದ್ಝೈ ಮೂರು ವಿಕೆಟ್ಗಳನ್ನು ಕಬಳಿಸಿದ್ದರು.
ಅಫ್ಘಾನಿಸ್ತಾನ ತಂಡವು ತನ್ನ 2ನೇ ಇನಿಂಗ್ಸ್ನಲ್ಲಿ 363 ರನ್ ಗಳಿಸಿತು. ರಹಮತ್ ಶಾ ಅವರು 139 ರನ್ ಗಳಿಸಿದ್ದರೆ, ಇಸ್ಮತ್ ಆಲಂ ತನ್ನ ಚೊಚ್ಚಲ ಪಂದ್ಯದಲ್ಲಿ 101 ರನ್ ಗಳಿಸಿ ಗಮನ ಸೆಳೆದರು. ಝಿಂಬಾಬ್ವೆ ಪರ ಬ್ಲೆಸ್ಸಿಂಗ್ ಮುಝರ್ಬಾನಿ(6-95) ಆರು ವಿಕೆಟ್ಗಳನ್ನು ಪಡೆದರೆ, ರಿಚರ್ಡ್(3-76) ಮೂರು ವಿಕೆಟ್ಗಳನ್ನು ಪಡೆದಿದ್ದರು.
ಝಿಂಬಾಬ್ವೆ ತನ್ನ ಎರಡನೇ ಇನಿಂಗ್ಸ್ನಲ್ಲಿ ಒಟ್ಟು 205 ರನ್ ಗಳಿಸಿದ್ದು, ಕ್ರೆಗ್ ಎರ್ವಿನ್(53 ರನ್) ಸರ್ವಾಧಿಕ ಸ್ಕೋರ್ ಗಳಿಸಿದರು. ರಶೀದ್ ಖಾನ್ ಒಟ್ಟು 7 ವಿಕೆಟ್ಗಳನ್ನು ಕಬಳಿಸಿ ಅಫ್ಘಾನಿಸ್ತಾನ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
2ನೇ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ(25 ರನ್, 4/94, 23 ರನ್, 7-66) ನೀಡಿದ ರಶೀದ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಒಟ್ಟು 392 ರನ್ ಗಳಿಸಿದ್ದ ರಹಮತ್ ಶಾ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.