IPL 2025 | ಈ ಸಲ ಕಪ್ ನಮ್ದೇನಾ?

Update: 2025-03-19 20:16 IST
IPL 2025  | ಈ ಸಲ ಕಪ್ ನಮ್ದೇನಾ?
  • whatsapp icon

ಬೆಂಗಳೂರು: ಐಪಿಎಲ್ ನಲ್ಲಿ ಕಳೆದ 17 ವರ್ಷಗಳಿಂದ ಒಂದೇ ಒಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳದ ಆರ್ ಸಿ ಬಿ ಈ ಬಾರಿ ಹೊಸ ತಂಡವನ್ನು ಕಟ್ಟುವ ಮೂಲಕ 18ನೇ ಆವೃತ್ತಿಯಲ್ಲಿ ಚೊಚ್ಚಲ ಕಪ್ ಗೆಲ್ಲುವ ನಿರೀಕ್ಷೆಯೊಂದಿಗೆ ದಿಟ್ಟ ಹೆಜ್ಜೆ ಇಟ್ಟಿದೆ.

ಪ್ರಶಸ್ತಿಯ ಬರವನ್ನು ನೀಗಿಸಲು ದಾಂಗುಡಿಯಿಟ್ಟಿರುವ ಆರ್‌ ಸಿ ಬಿ ಈ ಬಾರಿ ಮಾರ್ಚ್ 22 ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಮೊದಲ ಪಂದ್ಯವನ್ನು ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

► ಹೊಸ ನಾಯಕತ್ವದ ಮೇಲಿದೆ ನಿರೀಕ್ಷೆ

ದೇಶೀಯ ಕ್ರಿಕೆಟ್ ನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮಧ್ಯಪ್ರದೇಶ ಕ್ರಿಕೆಟ್ ತಂಡವನ್ನು ಫೈನಲ್ ಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದ ರಜತ್ ಪಾಟೀದಾರ್ ಗೆ ಈ ಬಾರಿ ಆರ್‌ ಸಿ ಬಿ ತಂಡದ ನಾಯಕತ್ವ ಒಲಿದಿದೆ.

ಬ್ಯಾಟಿಂಗ್ ಹಾಗೂ ತಂಡದ ನಾಯಕನಾಗಿಯೂ ಮಿಂಚಬೇಕಾಗಿರುವುದು 31 ವರ್ಷದ ರಜತ್ ಪಾಟೀದಾರ್ ಗೆ ಸವಾಲಾಗಲಿದೆ.

► ಕೋಚ್ ಸ್ಥಾನದಲ್ಲಿ ದಿನೇಶ್ ಕಾರ್ತಿಕ್

ವಿದೇಶಿಯರೇ ತುಂಬಿದ್ದ ತರಬೇತಿ ಬಳಗದಲ್ಲಿ ಈ ಬಾರಿ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಕೋಚ್ ಆಗಿ ಹೊಸ ಶಕ್ತಿ ತುಂಬಲಿದ್ದಾರೆ. ಈ ಹಿಂದಿನ 17 ಐಪಿಎಲ್ ಆವೃತ್ತಿಗಳಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಮ್ಯಾಚ್ ಫಿನಿಷರ್ ಆಗಿ ಗುರುತಿಸಿಕೊಂಡಿದ್ದ ದಿನೇಶ್ ಕಾರ್ತಿಕ್ ಈ ಬಾರಿ ತರಬೇತಿ ಬಳಗದಲ್ಲಿದ್ದುಕೊಂಡು ಆಟಗಾರರಿಗೆ ಹೊಸ ಹುರುಪನ್ನು ತುಂಬಲಿದ್ದಾರೆ.

► ವಿರಾಟ್ ಮೇಲಿದೆ ಭರವಸೆ

ಚಾಂಪಿಯನ್ ಟ್ರೋಫಿ 2025ರ ಟೂರ್ನಿಯಲ್ಲಿ ಬ್ಯಾಟಿಂಗ್ ಲಯಕ್ಕೆ ಬಂದಿರುವ ವಿರಾಟ್ ಕೊಹ್ಲಿ ಸತತ 18 ವರ್ಷಗಳ ಐಪಿಎಲ್ ಟ್ರೋಫಿಯ ಕಾಯುವಿಕೆಯನ್ನು ಕೊನೆಗೊಳಿಸಲಿದ್ದಾರೆ ಎಂಬ ನಿರೀಕ್ಷೆಯಿದೆ. ಟಿ20 ವಿಶ್ವಕಪ್, ಐಸಿಸಿ ಚಾಂಪಿಯನ್ ಟ್ರೋಫಿ ಯನ್ನು ಗೆದ್ದಿರುವ 'ಕಿಂಗ್ ಕೊಹ್ಲಿ' ವೃತ್ತಿಜೀವನದಲ್ಲಿ ಐಪಿಎಲ್ ಕಿರೀಟ ಸೇರ್ಪಡೆಯಾಗಲಿದೆಯೇ ಎಂಬ ಕುತೂಹಲ ಎಲ್ಲರಲ್ಲಿದೆ.

18ನೇ ಆವೃತ್ತಿಯ ಐಪಿಎಲ್ ಟ್ರೋಫಿಯು ಜರ್ಸಿ ನಂಬರ್-18ರ ಪಾಲಾಗಬೇಕು ಎನ್ನುವುದು ಅಭಿಮಾನಿಗಳ ಬಯಕೆ.

► ಸಿರಾಜ್, ಮ್ಯಾಕ್ಸ್ ವೆಲ್, ಡುಪ್ಲೆಸಿಸ್ ಇಲ್ಲದ ಆರ್‌ ಸಿ ಬಿ

ಆರ್‌ ಸಿ ಬಿ ತಂಡದ ಸ್ಟಾರ್ ಆಟಗಾರರಾದ ಮುಹಮ್ಮದ್ ಸಿರಾಜ್ ಕಳೆದ 8 ಆವೃತ್ತಿಗಳಲ್ಲೂ ಆರ್‌ ಸಿ ಬಿ ಜೊತೆಗಿದ್ದವರು. ಆರ್‌ ಸಿ ಬಿಯ ಸ್ಟಾರ್ ಬೌಲರ್ ಎನಿಸಿಕೊಂಡಿದ್ದರು. ಕಳೆದ ಬಾರಿ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಡುಪ್ಲೆಸಿಸ್ ಹಾಗೂ ಸ್ಟಾರ್ ಆಲ್‌ರೌಂಡರ್ ಆಗಿ ಮ್ಯಾಕ್ಸ್ ವೆಲ್ ಗುರುತಿಸಿಕೊಂಡಿದ್ದರು. ಆದರೆ ಈ ಬಾರಿ ಈ ಮೂವರು ಆಟಗಾರರನ್ನು ಕೈಬಿಟ್ಟು ಆರ್‌ ಸಿ ಬಿ ಹೊಸ ಆಟಗಾರರಿಗೆ ಮಣೆ ಹಾಕಿದೆ.

► ಸ್ಟಾರ್ ಆಟಗಾರರ ಸೇರ್ಪಡೆ

ಬೌಲಿಂಗ್ ವಿಭಾಗದಲ್ಲಿ ಮುಹಮ್ಮದ್ ಸಿರಾಜ್ ಅವರನ್ನು ಕೈ ಬಿಟ್ಟಿರುವ ಆರ್‌ ಸಿ ಬಿ ಈ ಸ್ಥಾನಕ್ಕೆ ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ, ಆಲ್‌ರೌಂಡರ್ ಕೃನಾಲ್ ಪಾಂಡ್ಯ, ಬ್ಯಾಟರ್ ಟಿಮ್ ಡೇವಿಡ್, ವಿಕೆಟ್ ಕೀಪರ್- ಬ್ಯಾಟರ್ ಫಿಲ್ ಸಾಲ್ಟ್, ಆಲ್‌ರೌಂಡರ್ ಗಳಾದ ಲಿಯಾಮ್ ಲಿವಿಂಗ್ ಸ್ಟೋನ್, ಜೇಕಬ್ ಬೆಥೆಲ್ ಈ ಆವೃತ್ತಿಯ ಆರ್‌ ಸಿ ಬಿ ಪಾಲಿನ ಹೊಸ ತಾರೆಯರಾಗಿದ್ದಾರೆ.

►ಕರ್ನಾಟಕದ ತಂಡಕ್ಕೆ ಇಬ್ಬರೇ ಕನ್ನಡಿಗರು

ಕಳೆದ ಮಗಾ ಹರಾಜಿನಲ್ಲಿ ಕೆ ಎಲ್ ರಾಹುಲ್, ಕರುಣ್ ನಾಯರ್ ಸಹಿತ ಕರ್ನಾಟಕದ ಕೆಲ ಪ್ರಮುಖ ಆಟಗಾರರನ್ನು ಸೇರಿಸಿಕೊಳ್ಳುವ ಅವಕಾಶವಿತ್ತಾದರೂ ಆರ್‌ ಸಿ ಬಿ ಈ ಅವಕಾಶವನ್ನು ಕೈ ಚೆಲ್ಲಿತ್ತು. ನಾಲ್ಕು ವರ್ಷಗಳ ಬಳಿಕ ಕನ್ನಡಿಗ ದೇವದತ್ ಪಡಿಕ್ಕಲ್ ಆರ್‌ ಸಿ ಬಿ ತಂಡಕ್ಕೆ ಮತ್ತೆ ಮರಳಿದ್ದಾರೆ. ಇವರನ್ನು ಬಿಟ್ಟರೆ ಮತ್ತೊಬ್ಬ ಕನ್ನಡಿಗ ಆಲ್ ರೌಂಡರ್ ಮನೋಜ್ ಭಾಂಡಗೆ ಅವರಿಗೆ ಆರ್‌ ಸಿ ಬಿ ಮಣೆ ಹಾಕಿದೆ.

►ಆರ್‌ ಸಿ ಬಿಯ ಸಂಭಾವ್ಯ ಆಡುವ 11ರ ಬಳಗ

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್ (ನಾಯಕ ), ಲಿಯಾಮ್ ಲಿವಿಂಗ್ ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್ ) , ಟಿಮ್ ಡೇವಿಡ್ / ಜೇಕಬ್ ಬೆಥೆಲ್ , ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಝಲ್ ವುಡ್/ನುವಾನ್ ತುಷಾರ/ ಲುಂಗಿ ಗಿಡಿ, ಯಶ್ ದಯಾಳ್.

►ಇಂಪ್ಯಾಕ್ಟ್ ಪ್ಲೇಯರ್ಸ್

ದೇವದತ್ ಪಡಿಕಲ್, ಸ್ವಪ್ನಿಲ್ ಸಿಂಗ್, ರಸಿಕ್ ದಾರ್, ಮನೋಜ್ ಭಾಂಡಗೆ

► ಮೀಸಲು ಬಳಗ

ಸ್ವಸ್ತಿಕ್ ಚಿಕಾರ, ರೊವಾರಿಯೊ ಶೆರ್ಡ್, ಅಭಿನಂದನ್ ಸಿಂಗ್, ಮೋಹಿತ್ ರಾಥಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮುಹಮ್ಮದ್ ಅಲಿ, ಮೋಂಟುಗೋಳಿ

contributor

Similar News