ಕ್ರಿಕೆಟ್ ಆಡಿದ್ದಕ್ಕೇ ವಿಷಾದ ಎನಿಸುತ್ತಿದೆ: ಭಾರತ ತಂಡದ ಮಾಜಿ ನಾಯಕ

PC: x.com/imransiddique
ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನ ನಾರ್ತ್ ಸ್ಟ್ಯಾಂಡ್ ನಿಂದ ತಮ್ಮ ಹೆಸರನ್ನು ಕಿತ್ತುಹಾಕುವಂತೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್ (ಎಚ್ ಸಿಎ) ಒಂಬಡ್ಸುಮನ್ ನೀಡಿರುವ ಸೂಚನೆ ವಿರುದ್ಧ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಈ ಘಟನೆ ಹೃದಯ ವಿದ್ರಾವಕ ಮತ್ತು ಇಡೀ ಕ್ರೀಡಾ ರಂಗಕ್ಕೆ ಮಾಡಿದ ಅಗೌರವ" ಎಂದು ತಮ್ಮ ಭಾವನೆಗಳನ್ನು ಹತ್ತಿಕ್ಕಿಕೊಳ್ಳಲಾಗದ ಅವರು ತಿಳಿಸಿದರು.
"ಇದನ್ನು ಹೇಳಲು ತೀವ್ರ ನೋವಾಗುತ್ತಿದೆ. ಆದರೆ ಕೆಲವೊಮ್ಮೆ ನನಗೆ ಕ್ರಿಕೆಟ್ ಆಡಿದ ಬಗ್ಗೆ ವಿಷಾದವಾಗುತ್ತದೆ. ಆಟದ ಬಗ್ಗೆ ಏನೂ ಗೊತ್ತಿಲ್ಲದವರು ಹುದ್ದೆಯನ್ನು ಹೊಂದುವುದು, ಪಾಠ ಮಾಡುವುದು ಮತ್ತು ಮುನ್ನಡೆಸುವುದು ಕಾಣುವಾಗ ಹೃದಯಕ್ಕೆ ನೋವಾಗುತ್ತದೆ. ಇದು ಇಡೀ ಕ್ರೀಡಾರಂಗಕ್ಕೆ ಅಗೌರವ" ಎಂದ ಅವರು ಐಎಎನ್ಎಸ್ ಜತೆ ಮಾತನಾಡುವ ವೇಳೆ ಅಭಿಪ್ರಾಯಪಟ್ಟರು.
ಅಝರುದ್ದೀನ್ 2019ರ ಸೆಪ್ಟೆಂಬರ್ ನಿಂದ 2023ರ ಸೆಪ್ಟೆಂಬರ್ ವರೆಗೆ ಎಚ್ ಸಿಎ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಒಂಬುಡ್ಸ್ಮನ್ ನಿರ್ಧಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಅವರು, ಬಿಸಿಸಿಐ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.