3ನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ರೆಹಾನ್ ಅಹ್ಮದ್ ವೀಸಾ ಸಮಸ್ಯೆ ಇತ್ಯರ್ಥ: ಇಂಗ್ಲೆಂಡ್ ವಿಶ್ವಾಸ

Update: 2024-02-13 16:03 GMT

ರೆಹಾನ್ ಅಹ್ಮದ್ | Photo: NDTV 

ಹೊಸದಿಲ್ಲಿ: ಮೂರನೇ ಟೆಸ್ಟ್ ಪಂದ್ಯವನ್ನಾಡಲು ಇಂಗ್ಲೆಂಡ್ ಕ್ರಿಕೆಟ್ ತಂಡ ಅಬುಧಾಬಿಯಿಂದ ಸೋಮವಾರ ಭಾರತಕ್ಕೆ ಆಗಮಿಸಿದ್ದು ಈ ವೇಳೆ ವಿಮಾನ ನಿಲ್ದಾಣದಿಂದ ನಿರ್ಗಮಿಸಲು ಸ್ಪಿನ್ನರ್ ರೆಹಾನ್ ಅಹ್ಮದ್ ಬಳಿ ಮಲ್ಪಿಪಲ್-ಎಂಟ್ರಿ ವೀಸಾ ಇಲ್ಲದೆ ಇರುವುದು ಅವರಿಗೆ ತೊಡಕಾಗಿ ಪರಿಣಮಿಸಿತು.

ಗುರುವಾರ ರಾಜ್ಕೋಟ್ ನಲ್ಲಿ ಮೂರನೇ ಟೆಸ್ಟ್ ಆರಂಭವಾಗುವ ಮೊದಲು ವೀಸಾ ಸಮಸ್ಯೆ ಬಗೆಹರಿಯಬಹುದು ಎಂದು ಅಹ್ಮದ್ ಅವರ ಸಹ ಆಟಗಾರ ಒಲಿ ಪೋಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶಾಖಪಟ್ಟಣದಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನಾಡಿದ ನಂತರ ಇಂಗ್ಲೆಂಡ್ ಅಬುಧಾಬಿಯಲ್ಲಿ 10 ದಿನಗಳ ವಿರಾಮವನ್ನು ಆನಂದಿಸಿದೆ. ಇಂಗ್ಲೆಂಡ್ ತಂಡ ಸೋಮವಾರ ಭಾರತಕ್ಕೆ ವಾಪಸಾದಾಗ ಸ್ಪಿನ್ನರ್ ಅಹ್ಮದ್ ಅವರು ಹಿಸಾರ್ ಏರ್ಪೋರ್ಟ್ನಲ್ಲಿ ಸಮಸ್ಯೆಯನ್ನು ಎದುರಿಸಿದರು. ಅವರ ಬಳಿ ಸಿಂಗಲ್ ಎಂಟ್ರಿ ವೀಸಾ ಇತ್ತು.

ಅದೃಷ್ಟವಶಾತ್ ಸ್ಥಳೀಯ ವಲಸೆ ಅಧಿಕಾರಿಗಳು 19ರ ಹರೆಯದ ಅಹ್ಮದ್ ಗೆ ಪ್ರವೇಶಕ್ಕೆ ಅನುಕೂಲವಾಗುವಂತೆ ಮಧ್ಯಂತರ ಎರಡು ದಿನಗಳ ವೀಸಾವನ್ನು ನೀಡಿದರು. ಈ ಸಮಸ್ಯೆ ಶೀಘ್ರವೇ ಬಗೆಹರಿಯಬಹುದು ಎಂದು ಪೋಪ್ ಆಶಾವಾದ ವ್ಯಕ್ತಪಡಿಸಿದರು.

ಇನ್ನು ಕೆಲವೇ ದಿನಗಳಲ್ಲಿ ಅಹ್ಮದ್ ಅವರ ವೀಸಾ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ರಾಜ್ಕೋಟ್ ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೋಪ್ ಹೇಳಿದ್ದಾರೆ.

ಅಹ್ಮದ್ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡು ವಿಕೆಟ್ ಗಳನ್ನು ಕಬಳಿಸಿದ್ದು, ಈ ಪಂದ್ಯವನ್ನು ಇಂಗ್ಲೆಂಡ್ 28 ರನ್ನಿಂದ ಗೆದ್ದುಕೊಂಡಿದೆ.

ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಅಹ್ಮದ್ ಆರು ವಿಕೆಟ್ ಗಳನ್ನು ಕಬಳಿಸಿದ್ದರು. ಆದರೆ ಈ ಪಂದ್ಯವನ್ನು ಭಾರತವು 106 ರನ್ನಿಂದ ಗೆದ್ದುಕೊಂಡು 5 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿತು.

ಭಾರತೀಯ ಅಧಿಕಾರಿಗಳು ಅಹ್ಮದ್ ಅವರ ದಾಖಲೆಗಳಲ್ಲಿ ಕೆಲವು ವ್ಯತ್ಯಾಸವನ್ನು ಗುರುತಿಸಿದ್ದಾರೆ. ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಭರವಸೆ ನೀಡಿದ್ದಾರೆ. ರಾಜ್ಕೋಟ್ ಏರ್ಪೋರ್ಟ್ನಲ್ಲಿರುವ ಅಧಿಕಾರಿಗಳು ತಾತ್ಕಾಲಿಕ ವೀಸಾದಲ್ಲಿ ರೆಹಾನ್ ಅಹ್ಮದ್ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು. ಸರಿಯಾದ ವೀಸಾವನ್ನು ಮುಂದಿನ ದಿನಗಳಲ್ಲಿ ಪ್ರಕ್ರಿಯೆಗೊಳಿಸಬೇಕು ಹಾಗೂ ವಿತರಿಸಬೇಕಾಗಿದೆ. ಅಹ್ಮದ್ ಮೂರನೇ ಟೆಸ್ಟ್ ಗೆ ಮುಂಚಿತವಾಗಿ ತಂಡದ ಉಳಿದ ಸದಸ್ಯರೊಂದಿಗೆ ತಯಾರಿ ಮುಂದುವರಿಸಲಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News