ಮಾನಸಿಕ ಖಿನ್ನತೆಯ ಅನುಭವಗಳನ್ನು ಬಿಚ್ಚಿಟ್ಟ ರಾಬಿನ್ ಉತ್ತಪ್ಪ

Update: 2024-08-20 16:13 GMT

PC : X \ @robbieuthappa

ಹೊಸದಿಲ್ಲಿ: ಹಿಂದೆ ತಾನು ಖಿನ್ನತೆಯಿಂದ ಬಳಲಿದ ರೀತಿ ಮತ್ತು ಅದನ್ನು ಹೇಗೆ ನಿಭಾಯಿಸಿದೆ ಎನ್ನುವುದನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಮಂಗಳವಾರ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವ ಹಿಂಜರಿಕೆಯನ್ನು ದೂರಗೊಳಿಸುವ ಮತ್ತು ಅದನ್ನು ನಿವಾರಿಸಲು ಚಿಕಿತ್ಸೆ ಪಡೆಯುವುದನ್ನು ಉತ್ತೇಜಿಸುವ ಉದ್ದೇಶದಿಂದ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ.

ಮಾನಸಿಕ ಖಿನ್ನತೆಯೊಂದಿಗಿನ ತನ್ನ ಅನುಭವವನ್ನು ಅವರು ಸಾಮಾಜಿಕ ಮಾಧ್ಯಮದ ಸಂದೇಶವೊಂದರ ಮೂಲಕ ಹೊರಗೆಡವಿದ್ದಾರೆ. ಖಿನ್ನತೆಯೊಂದಿಗಿನ ತನ್ನ ಸಮರವು ಕ್ರಿಕೆಟ್ ಮೈದಾನದಲ್ಲಿ ತಾನು ಎದುರಿಸಿದ ಯಾವುದೇ ಸವಾಲುಗಳಿಗಿಂತ ಹೆಚ್ಚಿನದಾಗಿತ್ತು ಎಂದು ಅವರು ಹೇಳಿದ್ದಾರೆ.

‘‘ಕ್ರಿಕೆಟ್ ಕ್ಷೇತ್ರದಲ್ಲಿ ನಾನು ಹಲವು ಯುದ್ಧಗಳನ್ನು ಎದುರಿಸಿದ್ದೇನೆ, ಆದರೆ ಅವು ಯಾವುದೂ ನಾನು ಖಿನ್ನತೆಯೊಂದಿಗೆ ಹೋರಾಡಿದ ಯುದ್ಧಕ್ಕಿಂತ ಕಠಿಣವಾಗಿರಲಿಲ್ಲ. ನಾನು ಇಂದು ಮಾನಸಿಕ ಆರೋಗ್ಯದ ಸುತ್ತ ಇರುವ ಮೌನವನ್ನು ಮುರಿಯುತ್ತಿದ್ದೇನೆ. ಯಾಕೆಂದರೆ ಇದರಲ್ಲಿ ನಾನು ಏಕಾಂಗಿಯಲ್ಲ ಎನ್ನುವುದು ನನಗೆ ಗೊತ್ತಿದೆ’’ ಎಂದು ಉತ್ತಪ್ಪ ‘ಎಕ್ಸ್’ನಲ್ಲಿ ಬರೆದಿದ್ದಾರೆ. ಈ ವಿಷಯದ ಬಗ್ಗೆ ಅವರು ತನ್ನ ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲೂ ಚರ್ಚಿಸಿದ್ದಾರೆ.

‘‘ನಾನೀಗ ಖಿನ್ನತೆ ಮತ್ತು ಆತ್ಮಹತ್ಯೆಗಳ ಬಗ್ಗೆ ಮಾತನಾಡುತ್ತೇನೆ. ನಾವು ಇತ್ತೀಚೆಗೆ (ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ) ಗ್ರಹಾಮ್ ತೋರ್ಪ್ ಮತ್ತು ಭಾರತದ ಡೇವಿಡ್ ಜಾನ್ಸನ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕೇಳಿದ್ದೇವೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ)ನ ಬೆನ್ನೆಲುಬು ಆಗಿದ್ದ ವಿ.ಬಿ. ಚಂದ್ರಶೇಖರ್ ಸರ್ ಸಾವನ್ನೂ ನಾವು ನೋಡಿದ್ದೇವೆ. ಇದೇ ಮಾನಸಿಕ ಸ್ಥಿತಿಯನ್ನು ನಾನೂ ಅನುಭವಿಸಿದ್ದೇನೆ. ಇದು ಉತ್ತಮ ವಿಷಯವಲ್ಲ. ಇದು ಯಾತನಾದಾಯಕ. ನಮ್ಮನ್ನು ಪ್ರೀತಿಸುವ ಜನರಿಗೆ ನಾವು ಹೊರೆಯಾಗುತ್ತೇವೆ ಎಂಬ ಭಾವನೆ ನಮ್ಮಲ್ಲಿ ಬರುತ್ತದೆ’’ ಎಂದು 38 ವರ್ಷದ ಉತ್ತಪ್ಪ ಹೇಳಿದರು.

ಮಾನಸಿಕ ಖಿನ್ನತೆಯ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮಹತ್ವವನ್ನು ಉತ್ತಪ್ಪ ತನ್ನ ಸಂದೇಶದಲ್ಲಿ ಒತ್ತಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News