'ರಾಜಸ್ಥಾನ'ದಲ್ಲಿ ಆರ್ ಸಿ ಬಿಯ ರಾಯಲ್ ಸವಾರಿ; ಆರ್ ಆರ್ ವಿರುದ್ಧ ಭರ್ಜರಿ ಜಯ

Update: 2025-04-13 19:08 IST
ರಾಜಸ್ಥಾನದಲ್ಲಿ ಆರ್ ಸಿ ಬಿಯ ರಾಯಲ್ ಸವಾರಿ; ಆರ್ ಆರ್ ವಿರುದ್ಧ ಭರ್ಜರಿ ಜಯ
photo : x/IPL
  • whatsapp icon

ಜೈಪುರ: ಫಿಲ್ ಸಾಲ್ಟ್(65 ರನ್) ಡೈನಾಮಿಕ್ ಇನಿಂಗ್ಸ್, ವಿರಾಟ್ ಕೊಹ್ಲಿ(ಔಟಾಗದೆ 62 ರನ್) ಅವರ 100ನೇ ಟಿ-20 ಅರ್ಧಶತಕ ಹಾಗೂ ದೇವದತ್ತ ಪಡಿಕ್ಕಲ್‌ರ(ಔಟಾಗದೆ 40) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರವಿವಾರ ನಡೆದ 28ನೇ ಐಪಿಎಲ್ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡವನ್ನು 9 ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಮಣಿಸಿದೆ. ಈ ಮೂಲಕ ತವರು ಮೈದಾನದ ಹೊರಗೆ ಪ್ರಸಕ್ತ ಋತುವಿನಲ್ಲಿ ಅಜೇಯ ಗೆಲುವಿನ ಓಟ ಮುಂದುವರಿಸಿದೆ.

ಅಸ್ಥಿರ ಬೌನ್ಸ್‌ ನಲ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡ ಆರ್‌ಸಿಬಿ ನಿರ್ಧಾರ ಫಲ ನೀಡಿತು. ರಾಜಸ್ಥಾನದ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರ ಕೌಶಲ್ಯಭರಿತ ಬ್ಯಾಟಿಂಗ್ ಆಕರ್ಷಣೀಯವಾಗಿತ್ತು.

ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದ ಬ್ಯಾಟಿಂಗ್‌ಗೆ ಕಠಿಣವಾದ ಪಿಚ್‌ನಲ್ಲಿ ಸಾಲ್ಟ್ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ತನ್ನ ಇನಿಂಗ್ಸ್‌ನಲ್ಲಿ 6 ಸಿಕ್ಸರ್ ಹಾಗೂ 5 ಬೌಂಡರಿಗಳನ್ನು ಗಳಿಸಿದ ಸಾಲ್ಟ್ ಅವರು ರಾಜಸ್ಥಾನದ ಬೌಲಿಂಗ್ ದಾಳಿಗೆ ಒತ್ತಡ ಹೇರಿದರು. ಸಾಲ್ಟ್ ಅವರ ಅಮೋಘ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಔಟಾಗದೆ 62 ರನ್ ಗಳಿಸಿ ಸಮರ್ಥ ಸಾಥ್ ನೀಡಿದರು.

ಇನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಜೋಫ್ರಾ ಆರ್ಚರ್ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಸಾಲ್ಟ್ ಆಕ್ರಮಣಕಾರಿ ಆಟಕ್ಕೆ ಮುಂದಾದರು. 28 ಎಸೆತಗಳಲ್ಲಿ ಪಂದ್ಯಾವಳಿಯಲ್ಲಿ ತನ್ನ 2ನೇ ಅರ್ಧಶತಕ ಪೂರೈಸಿದರು.

ರಾಜಸ್ಥಾನ ತಂಡವು ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿತು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದ್ದರೂ ಗೆಲುವು ಮರೀಚಿಕೆಯಾಯಿತು.

4ನೇ ಗೆಲುವಿನೊಂದಿಗೆ ಒಟ್ಟು 8 ಅಂಕ ಗಳಿಸಿರುವ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ರಾಜಸ್ಥಾನ 7ನೇ ಸ್ಥಾನದಲ್ಲಿದೆ.

ಗೆಲ್ಲಲು 174 ರನ್ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡವು 17.3 ಓವರ್‌ಗಳಲ್ಲಿ 1 ವಿಕೆಟ್‌ಗಳ ನಷ್ಟಕ್ಕೆ 175 ರನ್ ಗಳಿಸಿ ಗೆಲುವಿನ ದಡ ಸೇರಿತು.

8.4 ಓವರ್‌ಗಳಲ್ಲಿ 92 ರನ್ ಕಲೆ ಹಾಕಿದ ಫಿಲ್ ಸಾಲ್ಟ್(65 ರನ್, 33 ಎಸೆತ, 5 ಬೌಂಡರಿ,6 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ(ಔಟಾಗದೆ 62, 45 ಎಸೆತ, 4 ಬೌಂಡರಿ, 2 ಸಿಕ್ಸರ್) ಆರ್‌ಸಿಬಿ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು. 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಾಯದಿಂದ ಪಂದ್ಯಾವಳಿಯಲ್ಲಿ ತನ್ನ 2ನೇ ಅರ್ಧಶತಕ ಪೂರೈಸಿದ ಸಾಲ್ಟ್ ರಾಜಸ್ಥಾನದ ಗಾಯಕ್ಕೆ ಉಪ್ಪು ಸವರಿದರು.

ಸಾಲ್ಟ್ ಹಾಗೂ ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 6 ಓವರ್‌ಗಳಲ್ಲಿ 65 ರನ್ ಗಳಿಸಿತು. ಸಾಲ್ಟ್ ವಿಕೆಟನ್ನು ಪಡೆದ ಕಾರ್ತಿಕೇಯ ಮೊದಲ ವಿಕೆಟ್ ಜೊತೆಯಾಟ ಮುರಿದರು.

ಆಗ 2ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 83 ರನ್ ಸೇರಿಸಿದ ಕೊಹ್ಲಿ ಹಾಗೂ ದೇವದತ್ತ ಪಡಿಕ್ಕಲ್(ಔಟಾಗದೆ 40 ರನ್, 28 ಎಸೆತ, 5 ಬೌಂಡರಿ, 1 ಸಿಕ್ಸರ್)ತಂಡಕ್ಕೆ ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು.

ಆರ್‌ಸಿಬಿ ಬ್ಯಾಟಿಂಗ್ ಬೇಧಿಸಲು ರಾಜಸ್ಥಾನ 7 ಬೌಲರ್‌ಗಳನ್ನು ಕಣಕ್ಕಿಳಿಸಿದರೂ ಕಾರ್ತಿಕೇಯ(1-25)ಹೊರತುಪಡಿಸಿ ಉಳಿದವರು ವಿಕೆಟ್ ಪಡೆಯುವಲ್ಲಿ ವಿಫಲರಾದರು.

ಜೈಸ್ವಾಲ್ 75 ರನ್, ರಾಜಸ್ಥಾನ 173/4

ತವರು ಮೈದಾನ ಜೈಪುರದಲ್ಲಿ ಈ ವರ್ಷದ ಐಪಿಎಲ್‌ನಲ್ಲಿ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ ತಂಡವು ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅರ್ಧಶತಕದ(75 ರನ್, 47 ಎಸೆತ, 10 ಬೌಂಡರಿ, 2 ಸಿಕ್ಸರ್)ಕೊಡುಗೆಯ ನೆರವಿನಿಂದ 4 ವಿಕೆಟ್‌ಗಳ ನಷ್ಟಕ್ಕೆ 173 ರನ್ ಗಳಿಸಿದೆ.

ಸ್ಲೋ ಪಿಚ್‌ನಲ್ಲಿ ಎಡಗೈ ಬ್ಯಾಟರ್ ಜೈಸ್ವಾಲ್ ಕ್ಷಿಪ್ರವಾಗಿ ರನ್ ಗಳಿಸಿ ಗಮನ ಸೆಳೆದರು. ರಾಜಸ್ಥಾನದ ಪರ ಅಗ್ರ ಸ್ಕೋರರ್ ಎನಿಸಿಕೊಂಡರು. ಜೈಪುರದಲ್ಲಿ ಹಿಂದಿನ 6 ಇನಿಂಗ್ಸ್‌ಗಳಲ್ಲಿ 3 ಬಾರಿ ಅರ್ಧಶತಕಗಳನ್ನು ಗಳಿಸಿರುವ ನಾಯಕ ಸಂಜು ಸ್ಯಾಮ್ಸನ್ 19 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ಕೃನಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿ ನಿರಾಶೆಗೊಳಿಸಿದರು.

ಧ್ರುವ್ ಜುರೆಲ್(ಔಟಾಗದೆ 35, 23 ಎಸೆತ,2 ಬೌಂಡರಿ, 2 ಸಿಕ್ಸರ್), ಶಿಮ್ರೊನ್ ಹೆಟ್ಮೆಯರ್(9 ರನ್,8 ಎಸೆತ) ಹಾಗೂ ನಿತಿಶ್ ರಾಣಾ (ಔಟಾಗದೆ 4, 1 ಎಸೆತ) ಕೊನೆಯ 4 ಓವರ್‌ಗಳಲ್ಲಿ 47 ರನ್ ಗಳಿಸಿ ತಂಡದ ಮೊತ್ತವನ್ನು 173ಕ್ಕೆ ತಲುಪಿಸಿದರು.

ಇನಿಂಗ್ಸ್ ಆರಂಭಿಸಿದ ಜೈಸ್ವಾಲ್ ಹಾಗೂ ಸ್ಯಾಮ್ಸನ್ 6.5 ಓವರ್‌ಗಳಲ್ಲಿ 49 ರನ್ ಸೇರಿಸಿ ಸಾಧಾರಣ ಆರಂಭ ಒದಗಿಸಿದರು. ಸ್ಯಾಮ್ಸನ್ ಔಟಾದ ನಂತರ ಪರಾಗ್ ಹಾಗೂ ಜೈಸ್ವಾಲ್ 2ನೇ ವಿಕೆಟ್‌ಗೆ 56 ರನ್ ಸೇರಿಸಿ ತಂಡವನ್ನು ಆಧರಿಸಿದರು. ರಾಜಸ್ಥಾನ 126 ರನ್‌ಗೆ 3ನೇ ವಿಕೆಟ್ ಕಳೆದುಕೊಂಡಿತು.

ಹೆಟ್ಮೆಯರ್ ಹಾಗೂ ಧ್ರುವ ಜುರೆಲ್ 4ನೇ ವಿಕೆಟ್‌ಗೆ 43 ರನ್ ಸೇರಿಸುವ ಮೂಲಕ ತಂಡವು ಗೌರವಾರ್ಹ ಮೊತ್ತ ಗಳಿಸುವಲ್ಲಿ ನೆರವಾದರು.

ಆರ್‌ಸಿಬಿ ಪರ ಕೃನಾಲ್ ಪಾಂಡ್ಯ(1-29),ಹೇಝಲ್‌ವುಡ್(1-26), ಭುವನೇಶ್ವರ ಕುಮಾರ್(1-32) ಹಾಗೂ ಯಶ್ ದಯಾಳ್(1-36 )ತಲಾ ಒಂದು ವಿಕೆಟ್ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News