ಜೈಸ್ವಾಲ್ ರನ್ ಔಟ್ | ಸಂಜಯ್ ಮಂಜ್ರೇಕರ್ - ಇರ್ಫಾನ್ ಪಠಾಣ್ ನಡುವೆ ವಾಗ್ಯುದ್ದ

Update: 2024-12-27 11:11 GMT

Photo credit: NDTV

ಹೊಸದಿಲ್ಲಿ : ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಮೂರನೇ ವಿಕೆಟ್‌ಗೆ 102 ರನ್‌ಗಳ ಜೊತೆಯಾಟವನ್ನು ಕಟ್ಟಿದ್ದರಿಂದ ಆಸ್ಟ್ರೇಲಿಯಾ ವಿರುದ್ಧದ 4 ನೇ ಟೆಸ್ಟ್‌ನ 4 ನೇ ದಿನದಂದು ಭಾರತವು ಲಯಕ್ಕೆ ಮರಳಿದೆ.

ಜೈಸ್ವಾಲ್ ಮತ್ತು ಕೊಹ್ಲಿ ನಡುವೆ ಸಂವಹನ ಕೊರತೆಯಿಂದ ನಡೆದ ಆತುರದ ರನ್ ಗಳಿಕೆ ನಿರ್ಧಾರದಿಂದ ಯಶಸ್ವಿ ಜೈಸ್ವಾಲ್ ಅವರ ರನ್ ಔಟ್ ಗೆ ಕಾರಣವಾಯಿತು. ಜೈಸ್ವಾಲ್ ಅವರ ರನ್ ಔಟ್ ಗೆ ಯಾರನ್ನು ಹೊಣೆ ಮಾಡಬೇಕೆಂಬುದರ ಬಗ್ಗೆ ವಿಭಿನ್ನ ಸಿದ್ಧಾಂತಗಳನ್ನು ಮಂಡಿಸಿದ ಭಾರತದ ಮಾಜಿ ಕ್ರಿಕೆಟಿಗರಾದ ಸಂಜಯ್ ಮಂಜ್ರೇಕರ್ ಮತ್ತು ಇರ್ಫಾನ್ ಪಠಾಣ್ ಅವರು ಸ್ಟಾರ್ ಸ್ಪೋರ್ಟ್ಸ್‌ನ ಶೋನಲ್ಲಿ ತೀವ್ರ ವಾಗ್ವಾದದಲ್ಲಿ ತೊಡಗಿದರು.

ಜೈಸ್ವಾಲ್ ಅವರ ಕರೆಗೆ ಕೊಹ್ಲಿ ಸ್ಪಂದಿಸಬೇಕು ಮತ್ತು ಸಿಂಗಲ್ ತೆಗೆದುಕೊಳ್ಳಬೇಕು ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟರು. ಆದರೆ ಅದನ್ನು ಇರ್ಫಾನ್ ಪಠಾಣ್ ಒಪ್ಪಲಿಲ್ಲ. ಜೈಸ್ವಾಲ್ ಹೊಡೆದ ಹೊಡೆತವು ಸಾಕಷ್ಟು ಕಠಿಣವಾಗಿರುವುದರಿಂದ ಕೊಹ್ಲಿ ಕೂಡ ಸ್ಟ್ರೈಕರ್‌ನ ಕೊನೆಯಲ್ಲಿ ರನ್ ಔಟ್ ಆಗುವ ಅಪಾಯದಲ್ಲಿದ್ದರು ಎಂದು ಪಠಾಣ್ ಹೇಳಿದರು.

"ಬಾಲ್ ನಿಧಾನವಾಗಿ ಸಾಗುತ್ತಿತ್ತು. ಕೊಹ್ಲಿ ರನೌಟ್ ಆಗುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಇದು ಜೈಸ್ವಾಲ್ ಅವರ ರನ್ ಪ್ರಯತ್ನ. ಬಹುಶಃ ಅಪಾಯಕಾರಿ ರನ್ ಗಳಿಕೆ ಯತ್ನವಾದರೆ ಜೈಸ್ವಾಲ್ ಅಪಾಯದ ಗೆರೆಯಲ್ಲಿದ್ದರು. ಆದರೆ ಕೊಹ್ಲಿ ಅಪಾಯದಂಚಿನಲ್ಲಿರಲಿಲ್ಲ. ವಿರಾಟ್‌ ಅವರಿಂದ ಶಾಲಾ ಬಾಲಕನ ರೀತಿಯ ತಪ್ಪಾಗಿದೆ. ಒಂದು ವೇಳೆ ಇದು ಜೈಸ್ವಾಲ್‌ ನಿಂದ ಕೆಟ್ಟ ರನ್ ಗಳಿಕೆ ಯತ್ನ ಆಗಿದ್ದರೆ, ಅವರು ನಾನ್‌ಸ್ಟ್ರೈಕರ್‌ನ ಕೊನೆಯಲ್ಲಿ ಔಟ್ ಆಗುತ್ತಿದ್ದರು" ಎಂದು ಮಂಜ್ರೇಕರ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇರ್ಫಾನ್ ಪಠಾಣ್ ಬಾಲ್ ಎಷ್ಟು ವೇಗವಾಗಿ ಫೀಲ್ಡರ್ ಪ್ಯಾಟ್ ಕಮಿನ್ಸ್‌ ಬಳಿ ಹೋಯಿತು ಎಂಬುದನ್ನು ನೋಡಿದ ಕೊಹ್ಲಿ ಬಹುಶಃ ರನ್ ತೆಗೆದುಕೊಳ್ಳುವ ಧೈರ್ಯ ತೋರಲಿಲ್ಲ. ನಾನ್-ಸ್ಟ್ರೈಕರ್ ಆಗಿ, ವಿರಾಟ್ ಕೂಡ ಒಂದು ರನ್ ಅನ್ನು ಅಪಾಯಕಾರಿ ಎಂದು ಭಾವಿಸಿದರೆ ಅದನ್ನು ತಿರಸ್ಕರಿಸುವ ಹಕ್ಕಿದೆ ಎಂದು ಸಮರ್ಥಿಸಿಕೊಂಡರು.

ಪಠಾಣ್ ಅವರು ಹೀಗೆ ಹೇಳಿದ್ದು ಮಂಜ್ರೇಕರ್ ಅವರಿಗೆ ಅಪಥ್ಯವೆನಿಸಿತು. ಇರ್ಫಾನ್ ಪಠಾಣ್ ಮಾತಿಗೆ ಸಂಜಯ್ ಮಂಜ್ರೇಕರ್ ಮಧ್ಯಪ್ರವೇಶಿಸಲು ಯತ್ನಿಸಿದರು. ಆದರೆ ಸಾಧ್ಯವಾಗದಾಗ "ನೀವು ನನಗೆ ಮಾತನಾಡಲು ಅವಕಾಶ ನೀಡದಿದ್ದರೆ, ಪರವಾಗಿಲ್ಲ". ಎಂದರು.

ಇರ್ಫಾನ್ ತನ್ನ ಅಭಿಪ್ರಾಯವನ್ನು ಒತ್ತಿಹೇಳುವುದನ್ನು ಮುಂದುವರಿಸಿದ್ದರಿಂದ ಮಂಜ್ರೇಕರ್ ತನ್ನ ಶಾಂತತೆಯನ್ನು ಕಳೆದುಕೊಂಡರು. "ಇರ್ಫಾನ್ ಪಠಾಣ್ ಅವರ ಹೊಸ ವ್ಯಾಖ್ಯಾನವನ್ನು ಅದು ಓಟವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೋಚಿಂಗ್ ಕೈಪಿಡಿಗೆ ಸೇರಿಸಬೇಕು," ಎಂದು ಖಂಡಾತುಂಡವಾಗಿ ಹೇಳಿದರು.

ನಂತರ ಚರ್ಚೆಯಲ್ಲಿ, ಜೈಸ್ವಾಲ್ ಅವರು ಔಟಾಗಿದ್ದಕ್ಕೆ ವಿರಾಟ್ ಕೊಹ್ಲಿ ಕಾರಣ ಎಂದು ಮಂಜ್ರೇಕರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News