ಎರಡನೇ ಅನಧಿಕೃತ ಟೆಸ್ಟ್ | ಆಸ್ಟ್ರೇಲಿಯ ಎ ವಿರುದ್ಧ ಭಾರತ ಎ 161 ರನ್‌ಗೆ ಆಲೌಟ್
ಮೆಲ್ಬರ್ನ್ : ಮುಂಬರುವ ಆಸ್ಟ್ರೇಲಿಯ ನೆಲದಲ್ಲಿ ನಡೆಯುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡದ ಆಡುವ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸುವ ಕೆ.ಎಲ್.ರಾಹುಲ್ ಅವರ ಆಕಾಂಕ್ಷೆಗೆ ಹೊಡೆತಬಿದ್ದಿದೆ.
ಗುರುವಾರ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯ ಎ ವಿರುದ್ಧ ನಾಲ್ಕು ದಿನಗಳ ದ್ವಿತೀಯ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ಎ ಪರ ಬ್ಯಾಟಿಂಗ್ ಆರಂಭಿಸಿದ 32ರ ಹರೆಯದ ರಾಹುಲ್ ಕೇವಲ 4 ರನ್ ಗಳಿಸಿದರು. ಪರಿಣಾಮವಾಗಿ ಭಾರತ ಎ ತಂಡವು ಕೇವಲ 161 ರನ್‌ಗೆ ಆಲೌಟಾಯಿತು.
ತನ್ನ ಮೊದಲ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯ ಎ ತಂಡ ಮೊದಲ ದಿನದಾಟದಂತ್ಯಕ್ಕೆ 53 ರನ್‌ಗೆ 2 ವಿಕೆಟ್ ಗಳನ್ನು ಕಳೆದುಕೊಂಡಿದೆ. ಮಾರ್ಕಸ್ ಹ್ಯಾರಿಸ್ ಔಟಾಗದೆ 26 ರನ್ ಗಳಿಸಿದ್ದಾರೆ. ಮುಕೇಶ್ ಕುಮಾರ್(1-13) ಹಾಗೂ ಖಲೀಲ್ ಅಹ್ಮದ್(1-18) ತಲಾ ಒಂದು ವಿಕೆಟ್ ಪಡೆದರು.
ವಿಕೆಟ್‌ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ಏಕಾಂಗಿ ಹೋರಾಟ ನೀಡಿದ್ದು, 186 ಎಸೆತಗಳಲ್ಲಿ 6 ಬೌಂಡರಿ, ಎರಡು ಸಿಕ್ಸರ್‌ಗಳ ಸಹಾಯದಿಂದ 80 ರನ್ ಗಳಿಸಿದ್ದಾರೆ.
ಅಭಿಮನ್ಯು ಈಶ್ವರನ್(0) ಹಾಗೂ ಸಾಯಿ ಸುದರ್ಶನ್(0) ಅವರನ್ನು ಮೈಕಲ್ ನೆಸೆರ್ ಬೇಗನೆ ಪೆವಿಲಿಯನ್‌ಗೆ ಕಳುಹಿಸಿದರು. ಸ್ಕಾಟ್ ಬೋಲ್ಯಾಂಡ್ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸಿದ ರಾಹುಲ್ 3 ಎಸೆತಗಳ ನಂತರ ಬೋಲ್ಯಾಂಡ್‌ಗೆ ವಿಕೆಟ್ ಒಪ್ಪಿಸಿದರು.
ಆಸ್ಟ್ರೇಲಿಯ ಟೆಸ್ಟ್ ತಂಡದ ವೇಗದ ಬೌಲರ್ ಆಗಿರುವ ಮೈಕಲ್ ನೆಸೆರ್ 27 ರನ್‌ಗೆ 4 ವಿಕೆಟ್‌ಗಳನ್ನು ಕಬಳಿಸಿ ಭಾರತದ ಬ್ಯಾಟಿಂಗ್ ಸರದಿಗೆ ಸವಾಲಾದರು.
ಭಾರತವು ಮೊದಲ ಮೂರು ಓವರ್‌ಗಳಲ್ಲಿ 11 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಕ್ರೀಸಿಗೆ ಆಗಮಿಸಿದ ಜುರೆಲ್ ಅವರು ದೇವದತ್ತ ಪಡಿಕ್ಕಲ್(26 ರನ್)ಅವರೊಂದಿಗೆ 5ನೇ ವಿಕೆಟ್‌ಗೆ 53 ರನ್ ಸೇರಿಸಿ ಇನಿಂಗ್ಸ್ ರಿಪೇರಿ ಮಾಡಿದರು. ಆ ನಂತರ ಆಲ್‌ರೌಂಡರ್ ನಿತಿಶ್ ಕುಮಾರ್ ರೆಡ್ಡಿ(16 ರನ್) ಅವರೊಂದಿಗೆ ಆರನೇ ವಿಕೆಟ್‌ಗೆ 39 ರನ್ ಜೊತೆಯಾಟ ನಡೆಸಿದರು.
10ನೇ ಕ್ರಮಾಂಕದ ಬ್ಯಾಟರ್ ಪ್ರಸಿದ್ಧ ಕೃಷ್ಣ (14 ರನ್) ಭಾರತದ ಸ್ಕೋರನ್ನು 150ರ ಗಡಿ ದಾಟಿಸಿದರು. ಅಂತಿಮವಾಗಿ ಭಾರತ ತಂಡವು 161 ರನ್‌ಗೆ ಸರ್ವಪತನಗೊಂಡಿತು.
ಆಸ್ಟ್ರೇಲಿಯ ಎ ತಂಡದ ಪರ ಬ್ಯೂ ವೆಬ್‌ಸ್ಟರ್(3-19) ಭಾರತ ತಂಡದ ಕೆಳ ಕ್ರಮಾಂಕದ ಮೂರು ವಿಕೆಟ್‌ಗಳನ್ನು ಉರುಳಿಸಿದರು.
ಇದೀಗ ಒಂದಂಕಿ ಗಳಿಸಿ ಔಟಾಗಿರುವ ಕೆ.ಎಲ್.ರಾಹುಲ್ ಇನ್ನು 15 ದಿನಗಳಲ್ಲಿ ಪರ್ತ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸಕ್ಕೆ ಧಕ್ಕೆಯಾಗಿದೆ.
ನ್ಯೂಝಿಲ್ಯಾಂಡ್ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ 2ನೇ ಹಾಗೂ 3ನೇ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದ ರಾಹುಲ್ ಅವರು ಆಯ್ಕೆಗಾರರು, ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ರೋಹಿತ್ ಶರ್ಮಾರ ಮನ ಗೆಲ್ಲಲು ಎಂಸಿಜಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಅಗತ್ಯವಿತ್ತು.
ಅಸ್ಥಿರ ಪ್ರದರ್ಶನವು ರಾಹುಲ್ ಗೆ ಮುಳುವಾಗಿ ಪರಿಣಮಿಸಿದೆ. ರಾಹುಲ್ ಅವರು ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್ ಪಂದ್ಯಗಳಲ್ಲಿ 38 ರನ್ ಹಾಗೂ 68 ರನ್ ಗಳಿಸಿದ್ದರು. ಹೈದರಾಬಾದ್‌ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 86 ರನ್ ಗಳಿಸಿದ್ದರು. ಸೆಂಚೂರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಕೊನೆಯ ಬಾರಿ ಶತಕ(101 ರನ್)ಗಳಿಸಿದ್ದರು. ಈ ಶತಕಕ್ಕಿಂತ ಮೊದಲು ರಾಹುಲ್ 12 ಇನಿಂಗ್ಸ್‌ಗಳಲ್ಲಿ ಒಮ್ಮೆ ಮಾತ್ರ 25 ರನ್ ಗಳಿಸಿದ್ದರು.
►ಆಸ್ಟ್ರೇಲಿಯದಲ್ಲಿ ರಾಹುಲ್ ದಾಖಲೆ
ಸದ್ಯಕ್ಕೆ ಉತ್ತಮ ಫಾರ್ಮ್‌ನಲ್ಲಿಲ್ಲದ ಕೆ.ಎಲ್.ರಾಹುಲ್ ಅವರು ಆಸ್ಟ್ರೇಲಿಯದಲ್ಲಿ ಈ ತನಕ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ರಾಹುಲ್ ಅವರು ಅಗ್ರ ಕ್ರಮಾಂಕ ಹಾಗೂ ಮಧ್ಯಮ ಸರದಿಯಲ್ಲೂ ಬ್ಯಾಟಿಂಗ್ ಮಾಡಬಲ್ಲರು.
ರಾಹುಲ್ ಈ ತನಕ ಆಡಿರುವ 5 ಟೆಸ್ಟ್ ಪಂದ್ಯಗಳಲ್ಲಿ 20.77ರ ಸರಾಸರಿಯಲ್ಲಿ 187 ರನ್ ಗಳಿಸಿದ್ದು, 2015ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ 110 ರನ್ ಗಳಿಸಿದ್ದರು.
ಶತಕ ಗಳಿಸಿದ ನಂತರ ಇನ್ನುಳಿದ 7 ಇನಿಂಗ್ಸ್‌ಗಳಲ್ಲಿ ರಾಹುಲ್ ಕೇವಲ 61 ರನ್ ಗಳಿಸಿದ್ದು, ಆರು ಬಾರಿ ಒಂದಂಕಿ ಸ್ಕೋರ್ ಗಳಿಸಿದ್ದಾರೆ. ಈ ವೇಳೆ 44 ರನ್ ಟಾಪ್ ಸ್ಕೋರ್ ಆಗಿದೆ.