ಶೂಟಿಂಗ್ ವಿಶ್ವಕಪ್: ಸಿಮ್ರನ್‌ಪ್ರೀತ್‌ಗೆ ಬೆಳ್ಳಿ, ಮನು ಭಾಕರ್ ಗೆ 4ನೇ ಸ್ಥಾನ

ಸಿಮ್ರನ್ ಪ್ರೀತ್ ಕೌರ್ ಬ್ರಾರ್ | PC : NRAI
ಲಿಮಾ: ಇಂಟರ್ ನ್ಯಾಶನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್(ಐಎಸ್‌ಎಸ್‌ಎಫ್)ವಿಶ್ವಕಪ್‌ನ ಕೊನೆಯ ದಿನವಾದ ಸೋಮವಾರ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಸಿಮ್ರನ್ ಪ್ರೀತ್ ಕೌರ್ ಬ್ರಾರ್ ಬೆಳ್ಳಿ ಪದಕ ಗೆದ್ದುಕೊಂಡರು. ಈ ಮೂಲಕ ಸೀನಿಯರ್ ಇಂಟರ್ ನ್ಯಾಶನಲ್ ಟೂರ್ನಿಯಲ್ಲಿ ತನ್ನ ಮೊದಲ ಪದಕ ತನ್ನದಾಗಿಸಿಕೊಂಡರು.
10 ಸರಣಿಗಳ ಐದು ರ‍್ಯಾಪಿಡ್-ಫೈಯರ್ ಶಾಟ್ಸ್ ಫೈನಲ್‌ನಲ್ಲಿ ಒಟ್ಟು 33 ಅಂಕ ಗಳಿಸಿದ ಭಾರತೀಯ ಶೂಟರ್ ಮೊದಲ ಸ್ಥಾನ ಪಡೆದ ಚೀನಾದ ಸನ್ ಯುಜೀಗಿಂತ ಒಂದು ಅಂಕ ಕಡಿಮೆ ಪಡೆದರು. ಸನ್ ಯುಜೀ ಸ್ಪರ್ಧೆಯಲ್ಲಿ ಸತತ ಎರಡನೇ ವಿಶ್ವಕಪ್ ಚಿನ್ನ ಗೆದ್ದುಕೊಂಡರು. ಸನ್ ಅವರ ಸಹಪಾಠಿ ಯಾವೊ ಕ್ವಿಯಾನ್‌ಕ್ಸುನ್ 29 ಅಂಕದೊಂದಿಗೆ ಕಂಚಿನ ಪದಕ ಜಯಿಸಿದರು.
ಒಲಿಂಪಿಕ್ಸ್ ನಲ್ಲಿ ಅವಳಿ ಪದಕ ವಿಜೇತೆ ಮನು ಭಾಕರ್, ಮಿಕ್ಸೆಡ್ ಟೀಮ್ ಪಿಸ್ತ್ತೂಲ್ ವರ್ಲ್ಡ್ ಚಾಂಪಿಯನ್ ಇಶಾ ಸಿಂಗ್ ಹಾಗೂ ಸಿಮ್ರನ್‌ಪ್ರೀತ್ ದಿನದ ಆರಂಭದಲ್ಲಿ ಫೈನಲ್ ಗೆ ಪ್ರವೇಶ ಪಡೆದಿದ್ದರು.
ಮನು ಅರ್ಹತಾ ಸುತ್ತಿನಲ್ಲಿ 585 ಅಂಕ ಗಳಿಸಿ 2ನೇ ಸ್ಥಾನ ಪಡೆದರೆ, ಸಿಮ್ರನ್‌ಪ್ರೀತ್ 580 ಅಂಕ ಗಳಿಸಿ 5ನೇ ಸ್ಥಾನ ಪಡೆದಿದ್ದರು. ಈ ಹಿಂದೆ ಅರ್ಜೆಂಟೀನದಲ್ಲಿ ನಡೆದಿದ್ದ ವಿಶ್ವಕಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದ ಇಶಾ ಸಿಂಗ್ 575 ಅಂಕದೊಂದಿಗೆ 8ನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದಿದ್ದರು.
ಚೀನಾದ ಮೂವರು ಸ್ಪರ್ಧಿಗಳು, ಜರ್ಮನಿಯ ಡೊರೀನ್ ವೆನ್ನೆಕ್ಯಾಂಪ್ ಹಾಗೂ ಆಂಡ್ರೀ ಪೆನಾ ಕೂಡ ಫೈನಲ್ ಗೆ ತಲುಪಿದ್ದರು.
ಭಾರತವು ಸ್ಪರ್ಧಾವಳಿಯಲ್ಲಿ ಎರಡು ಚಿನ್ನ, 4 ಬೆಳ್ಳಿ ಹಾಗೂ 1 ಕಂಚಿನ ಪದಕ ಜಯಿಸಿತು.