ಐಸಿಸಿ ಏಕದಿನ ರ‍್ಯಾಂಕಿಂಗ್: ಅಗ್ರ ಸ್ಥಾನಕ್ಕೇರಿದ ಶುಭಮನ್ ಗಿಲ್
ಶುಭಮನ್ ಗಿಲ್ | PTI
ಹೊಸದಿಲ್ಲಿ: ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆರಂಭವಾದ ದಿನದಂದೇ ಬುಧವಾರ ಬಿಡುಗಡೆಯಾಗಿರುವ ಐಸಿಸಿ ರ‍್ಯಾಂಕಿಂಗ್ ನಲ್ಲಿ ಭಾರತ ಕ್ರಿಕೆಟ್ ತಂಡದ ಉಪ ನಾಯಕ ಶುಭಮನ್ ಗಿಲ್ ಪಾಕಿಸ್ತಾನದ ಬ್ಯಾಟರ್ ಬಾಬರ್ ಆಝಮ್‌ರನ್ನು ಹಿಂದಿಕ್ಕಿ ಅಗ್ರ ರ್ಯಾಂಕಿನ ಏಕದಿನ ತಂಡದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಇತ್ತೀಚೆಗೆ ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಗಿಲ್, ದೀರ್ಘ ಸಮಯದಿಂದ ಅಗ್ರ ಸ್ಥಾನದಲ್ಲಿದ್ದ ಬಾಬರ್ ರನ್ನು ಹಿಂದಿಕ್ಕಿ ನಂ.1 ಬ್ಯಾಟರ್ ಎನಿಸಿಕೊಂಡರು.
25ರ ಹರೆಯದ ಭಾರತದ ಆರಂಭಿಕ ಆಟಗಾರ ಗಿಲ್ ಎರಡು ಅರ್ಧಶತಕ ಹಾಗೂ ಒಂದು ಶತಕ ಗಳಿಸಿ ಇಂಗ್ಲೆಂಡ್ ವಿರುದ್ಧ ಭಾರತ ತಂಡವು 3-0 ಅಂತರದಿಂದ ಸರಣಿ ಗೆದ್ದು ಕ್ಲೀನ್‌ಸ್ವೀಪ್ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಗಿಲ್ 796 ರೇಟಿಂಗ್ ಪಾಯಿಂಟ್ಸ್ ಪಡೆದರೆ, ಬಾಬರ್ 773 ಅಂಕ ಗಳಿಸಿದರು.
ಗಿಲ್ ವೃತ್ತಿಜೀವನದಲ್ಲಿ ಎರಡನೇ ಬಾರಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಹಿಂದೆ 2023ರ ಆವೃತ್ತಿಯ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವೇಳೆ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ್ದರು.
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ 761 ಅಂಕದೊಂದಿಗೆ 3ನೇ ಸ್ಥಾನ ಪಡೆದರೆ, ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ ಹಾಗೂ ನ್ಯೂಝಿಲ್ಯಾಂಡ್‌ನ ಡ್ಯಾರಿಲ್ ಮಿಚೆಲ್ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನ ಪಡೆದಿದ್ದಾರೆ.
►ಏಕದಿನ ಬೌಲಿಂಗ್ ರ‍್ಯಾಂಕಿಂಗ್: ಮಹೀಶ್ ತೀಕ್ಷಣಗೆ ಅಗ್ರ ಸ್ಥಾನ
ಬೌಲಿಂಗ್ ವಿಭಾಗದಲ್ಲಿ ಶ್ರೀಲಂಕಾದ ಮಹೀಶ್ ತೀಕ್ಷಣ ಅಫ್ಘಾನಿಸ್ತಾನದ ರಶೀದ್ ಖಾನ್‌ರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾ ತಂಡ ಭಾಗವಹಿಸದೇ ಇದ್ದರೂ ಆಸ್ಟ್ರೇಲಿಯ ವಿರುದ್ಧ ಕೊಲಂಬೊದಲ್ಲಿ 4 ವಿಕೆಟ್ ಗೊಂಚಲು ಸಹಿತ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ತೀಕ್ಷಣ 680 ರೇಟಿಂಗ್ ಪಾಯಿಂಟ್ಸ್ ಪಡೆದಿದ್ದಾರೆ. ರಶೀದ್ 2ನೇ ಸ್ಥಾನದಲ್ಲಿದ್ದು, ಕೇವಲ 11 ಅಂಕ ಹಿಂದಿದ್ದಾರೆ. ಮತ್ತೊಮ್ಮೆ ಅಗ್ರ ಸ್ಥಾನಕ್ಕೇರುವ ವಿಶ್ವಾಸದಲ್ಲಿದ್ದಾರೆ.
ಅಫ್ಘಾನಿಸ್ತಾನದ ಮುಹಮ್ಮದ್ ನಬಿ ಮತ್ತೊಮ್ಮೆ ಏಕದಿನ ಆಲ್‌ರೌಂಡರ್‌ಗಳ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೆ ಮರಳಿದ್ದಾರೆ.