ವಾಗ್ಯುದ್ಧದ ಬಳಿಕ ಮೈದಾನದಲ್ಲೇ ಸಿರಾಜ್-ಟ್ರಾವಿಸ್ ಹೆಡ್ ಆಲಿಂಗನ!
ಅಡಿಲೇಡ್: ಇಲ್ಲಿನ ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ-ಆಸ್ಟ್ರೇಲಿಯ ತಂಡದ ನಡುವಿನ ಎರಡನೆ ಟೆಸ್ಟ್ ಪಂದ್ಯದ ಎರಡನೆ ದಿನದಾಟದಲ್ಲಿ ಪರಸ್ಪರ ವಾಗ್ಯುದ್ಧ ನಡೆಸಿದ್ದ ಆಸ್ಟ್ರೇಲಿಯ ತಂಡದ ಬ್ಯಾಟರ್ ಟ್ರಾವಿಸ್ ಹೆಡ್ ಹಾಗೂ ಭಾರತ ತಂಡದ ವೇಗಿ ಮುಹಮ್ಮದ್ ಸಿರಾಜ್, ಪಂದ್ಯ ಮುಕ್ತಾಯಗೊಂಡ ನಂತರ ಪರಸ್ಪರ ಆಲಿಂಗಿಸಿಕೊಂಡಿದ್ದು ಪ್ರೇಕ್ಷಕರ ಗಮನ ಸೆಳೆಯಿತು.
ಪ್ರಥಮ ಇನಿಂಗ್ಸ್ ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ನಡೆಸಿದ ಟ್ರಾವಿಸ್ ಹೆಡ್, ಅಮೋಘ 140 ರನ್ ಗಳಿಸಿದರು. ಕೊನೆಗೆ ಮುಹಮ್ಮದ್ ಸಿರಾಜ್ ರ ಅತ್ಯುತ್ತಮ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಮುಹಮ್ಮದ್ ಸಿರಾಜ್ ಎಸೆತವನ್ನು ಟ್ರಾವಿಸ್ ಹೆಡ್ ಶ್ಲಾಘಿಸಿದ್ದರಾದರೂ, ಅದನ್ನು ಭಾರತೀಯ ವೇಗಿ ಮುಹಮ್ಮದ್ ಸಿರಾಜ್ ತಪ್ಪಾಗಿ ಅರ್ಥೈಸಿಕೊಂಡರು. ಹೀಗಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ, ಮಾತನಾಡಿದ್ದ ಟ್ರಾವಿಸ್ ಹೆಡ್, ಏನೂ ಇಲ್ಲದ್ದನ್ನು ವಿವಾದವಾಗಿಸಿದ ಸಿರಾಜ್ ವರ್ತನೆಯಿಂದ ಬೇಸರವಾಯಿತು ಎಂದು ಹೇಳಿದ್ದರು.
ಮೂರೇ ದಿನಕ್ಕೆ ಮುಕ್ತಾಯಗೊಂಡ ದ್ವಿತೀಯ ಟೆಸ್ಟ್ ನಲ್ಲಿ ಆಸ್ಟ್ರೇಲಿಯ ತಂಡ 10 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಇದಕ್ಕೂ ಮುನ್ನ, ತನ್ನ ಎರಡನೆ ಇನಿಂಗ್ಸ್ ನಲ್ಲಿ 175 ರನ್ ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆದ ಭಾರತ ತಂಡ, ಆಸ್ಟ್ರೇಲಿಯಗೆ 19 ರನ್ ಗಳ ಗೆಲುವಿನ ಗುರಿಯನ್ನು ನೀಡಿತು.
19 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ತಂಡವು 10 ವಿಕೆಟ್ ಗಳ ಜಯ ಸಾಧಿಸಿ, ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.