ಕೊನೆಗೂ ʼಚೋಕರ್ʼ ಹಣೆಪಟ್ಟಿಯಿಂದ ಹೊರಬಂದು ಇತಿಹಾಸ ನಿರ್ಮಿಸಿದ ದಕ್ಷಿಣ ಅಫ್ರಿಕಾ
ದಕ್ಷಿಣ ಆಫ್ರಿಕಾ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಬಲಿಷ್ಠ ತಂಡಗಳಲ್ಲೊಂದು. ಅದರಲ್ಲಿರುವ ಅಪ್ಪಟ ಪ್ರತಿಭಾವಂತರೂ ಕಡಿಮೆಯೇನಲ್ಲ. ಜಾಕ್ ಕಾಲಿಸ್, ಹಾಶಿಮ್ ಆಮ್ಲ, ಗ್ರೇಮ್ ಸ್ಮಿತ್, ಎಬಿ ಡಿವಿಲಿಯರ್ಸ್, ಡೇಲ್ ಸ್ಟೇನ್ ರಂತಹ ದಿಗ್ಗಜರೆ ಇದ್ದರೂ ಈ ಟೀಮ್ ಒಮ್ಮೆಯೂ ಯಾವುದೇ ಐಸಿಸಿ ವಿಶ್ವಕಪ್ ನ ಫೈನಲ್ ಗೆ ತಲುಪಲು ಸಾಧ್ಯವಾಗಿರಲಿಲ್ಲ. ಆದರೆ ಇಂದಿನಿಂದ ಆ ಇತಿಹಾಸ ಬದಲಾಗಲಿದೆ.
ಐಸಿಸಿಯ ಪ್ರಮುಖ ಟೂರ್ನಿಗಳ ಸೆಮಿ ಫೈನಲ್ ನಲ್ಲೇ ಮುಗ್ಗರಿಸುವ ತಮ್ಮ ಚಾಳಿಯನ್ನು ಮುರಿದು 2024 ರ ಟಿ20 ವಿಶ್ವಕಪ್ ನ ಫೈನಲ್ ಗೆ ದಕ್ಷಿಣ ಆಫ್ರಿಕಾ ಲಗ್ಗೆ ಹಾಕಿದೆ. ಆ ಮೂಲಕ ಹೊಸತೊಂದು ಇತಿಹಾಸ ನಿರ್ಮಾಣವಾಗಿದೆ.
ಈ ವಿಶಿಷ್ಟ ಜಯದ ಮೂಲಕ ದಕ್ಷಿಣ ಆಫ್ರಿಕಾವನ್ನು ಕಾಡುತ್ತಿದ್ದ ಸೆಮಿ ಫೈನಲ್ ಅಪಾಯವನ್ನು ಅದು ಮೆಟ್ಟಿ ನಿಂತಿದೆ. ವಿಶ್ವಕಪ್ ಹಿಡಿಯುವ ಅವಕಾಶವಿರುವ ಕೊನೆಯ ಪಂದ್ಯಕ್ಕೆ ಪ್ರವೇಶಿಸಿದೆ. ಅದ್ಭುತ ಪ್ರದರ್ಶನ ನೀಡಿ ಸೆಮಿ ಫೈನಲ್ ತಲುಪಿದ್ದ ಅಫ್ಘಾನಿಸ್ತಾನವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿ ತನ್ನ ಮೊದಲ T20 ವಿಶ್ವಕಪ್ ಫೈನಲ್‌ಗೆ ದಕ್ಷಿಣ ಆಫ್ರಿಕಾ ಪ್ರವೇಶಿಸಿದೆ.
ಅಸಾಧಾರಣ ವೇಗದ ಬೌಲಿಂಗ್ ಪ್ರದರ್ಶನದ ಮೂಲಕ ತಮಗಿರುವ ಸೆಮಿಫೈನಲ್ ಶಾಪವನ್ನು ದಕ್ಷಿಣ ಆಫ್ರಿಕಾ ಅಳಿಸಿ ಹಾಕಿದೆ.
ಸೆಮಿ ಫೈನಲ್ ಸೋತಿದ್ದರೂ ಈ ವರ್ಲ್ಡ್ ಕಪ್ ನಲ್ಲಿ ಅವರ ಪ್ರದರ್ಶನದಿಂದಾಗಿ ಆಫ್ಘನ್ನರು ಹೆಮ್ಮೆಯಿಂದ ಮನೆಗೆ ಹೋಗಬಹುದು. ಜನರು ನಿದ್ದೆ ಮಾಡಲೇ ಮರೆತು ಬಿಟ್ಟಿದ್ದ ದೇಶದಲ್ಲಿ, ಕನಸು ಕಾಣುವ ಹಾಗೆ ಮಾಡಿದ ಶ್ರೇಯಸ್ಸು ರಶೀದ್ ಖಾನ್ ನೇತೃತ್ವದ ಆಫ್ಘನ್ ಪಡೆಗೆ ಸಲ್ಲಬೇಕು. ವಿಶ್ವಚಾಂಪಿಯನ್ ಆಸ್ಟ್ರೇಲಿಯವನ್ನೇ ಈ ಟೂರ್ನಿಯಲ್ಲಿ ಸೋಲಿಸಿ ಬೀಗಿದ್ದಾರೆ ಅಫ್ಘಾನ್ ಕ್ರಿಕೆಟ್ ಕಲಿಗಳು.
ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟೋಸ್ ಸೋತು ಮೊದಲು ಬೌಲಿಂಗ್ ಮಾಡಬೇಕಾಯಿತು. ಆದರೆ ಮಾರ್ಕೊ ಜಾನ್ಸನ್ 3 ವಿಕೆಟ್, ಕಗಿಸೊ ರಬಾಡ 2 ವಿಕೆಟ್ ಮತ್ತು ಆನ್ರಿಚ್ ನಾರ್ಟ್ಜೆ 2 ವಿಕೆಟ್‌ಗ ಪಡೆಯುವ ಮೂಲಕ ಅಫ್ಘಾನಿಸ್ತಾನದ ಬ್ಯಾಟಿಂಗ್ ಪಡೆಯನ್ನು ದಕ್ಷಿಣ ಆಫ್ರಿಕಾ ಸಂಪೂರ್ಣ ಮಲಗಿಸಿಬಿಟ್ಟಿತು. ಕೇವಲ 11.5 ಓವರ್‌ಗಳಲ್ಲಿ 56 ರನ್‌ಗಳಿಗೆ ಅಫ್ಘಾನಿಸ್ತಾನ ತಂಡ ಹೀನಾಯವಾಗಿ ಆಲ್ ಔಟ್ ಆಯಿತು.
ಚೇಸಿಂಗ್ ನಲ್ಲಿ ಕ್ವಿಂಟನ್ ಡಿ ಕಾಕ್ ಆರಂಭದಲ್ಲೇ ಔಟ್ ಆದರೂ, ದಕ್ಷಿಣ ಆಫ್ರಿಕಾ 8.5 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದು 60 ರನ್ ತಲುಪಿ ವಿಜಯದ ನಗೆ ಬೀರಿತು.
29 ರನ್ ಗಳಿಸಿದ ರೀಜಾ ಹೆಂಡ್ರಿಕ್ಸ್ ಈ ಟೂರ್ನಿಯಲ್ಲಿ ತಮ್ಮ ಅತ್ಯಧಿಕ ಸ್ಕೋರ್ ಮಾಡಿದರು ಮತ್ತು ಔಟಾಗದೆ 23 ರನ್ ಗಳಿಸಿದ ನಾಯಕ ಏಡೆನ್ ಮಾರ್ಕ್ರಾಮ್ ಅವರು ತಂಡವನ್ನು ಸುರಕ್ಷಿತವಾಗಿ ವಿಜಯದ ದಡ ತಲುಪಿಸಿದರು. ಈ ಮೂಲಕ ನಿರ್ಣಾಯಕ ಸಂದರ್ಭದಲ್ಲಿ ಒತ್ತಡಕ್ಕೆ ಬಿದ್ದು ಚೋಕ್ ಆಗುವ ಹಣೆಪಟ್ಟಿಯಿಂದ ದಕ್ಷಿಣ ಆಫ್ರಿಕಾ ಮುಕ್ತವಾಯಿತು.
ಸೌತ್ ಆಫ್ರಿಕಾ ಬೌಲರ್ ಗಳು ಪವರ್‌ಪ್ಲೇಯೊಳಗೆಯೇ ಆಫ್ಘನ್ನರನ್ನು ಕೇವಲ ಐದು ವಿಕೆಟ್‌ಗೆ 28 ರನ್ ಗೆ ಇಳಿಸಿದರು. 56 ರನ್ ಗೆ ಅಫ್ಗಾನಿಸ್ತಾನ ಆಲ್ ಔಟ್ ಆಗಿ ಬಿಟ್ಟಿತು. ಇದು ಟಿ20 ವಿಶ್ವಕಪ್ ಸೆಮಿಫೈನಲ್ ಇತಿಹಾಸದಲ್ಲೇ ಅತಿ ಕಡಿಮೆ ಸ್ಕೊರ್. ಈ ಮೂಲಕ ಅಫ್ಘಾನಿಸ್ತಾನ ಚೊಚ್ಚಲ ವಿಶ್ವಕಪ್ ಫೈನಲ್‌ಗೆ ತಲುಪುವ ಅವರ ಕನಸು ಪ್ರಾರಂಭವಾಗುವ ಮೊದಲೇ ನುಚ್ಚುನೂರಾಗಿ ಹೋಯಿತು.
ಇವತ್ತಿನಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ್ದು ಹೊಸ ಇತಿಹಾಸ. ಚೋಕರ್ ಹಣೆಪಟ್ಟಿ ಅವರಿಗೆ ಇನ್ನಿಲ್ಲ. ಸೆಮಿ ಫೈನಲ್ ನಲ್ಲಿ ಶಾಶ್ವತ ದುರಾದೃಷ್ಟವೇ ಸೌತ್ ಆಫ್ರಿಕಾ ಪಾಲಿಗೆ ಫಿಕ್ಸ್ ಎಂದೇ ಎಲ್ಲರೂ ಹೇಳುತ್ತಿದ್ದರು.
ಆದರೆ ಆ ದುರದೃಷ್ಟವನ್ನು ತಮ್ಮ ಆಟದ ಮೂಲಕ ಏಡನ್ ಮಾರ್ಕ್ರಂ ಪಡೆ ಸೋಲಿಸಿದೆ. ಏಡೆನ್ ಮಾರ್ಕ್ರಮ್ ಮತ್ತು ಅವರ ತಂಡ ಹೊಸ ಭರವಸೆಯೊಂದಿಗೆ ಇದೇ ಮೊದಲ ಬಾರಿ ವಿಶ್ವಕಪ್ ಫೈನಲ್ ಆಡಲು ಕಿಂಗ್ಸ್ಟನ್ ಓವಲ್‌ಗೆ ತೆರಳುತ್ತಿದ್ದಾರೆ.
ಈಗ ಇತಿಹಾಸದ ಬಾಗಿಲನ್ನು ಸೌತ್ ಆಫ್ರಿಕಾ ತಟ್ಟುತ್ತಿದೆ. ಬಾಗಿಲಿನ ಇನ್ನೊಂದು ಕಡೆ ಎರಡನೇ ಸೆಮಿ ಫೈನಲ್ ನಿಂದ ಭಾರತ ಬರಲಿದೆಯೋ ಅಥವಾ ಇಂಗ್ಲೆಂಡ್ ಬರಲಿದೆಯೋ ಎಂಬ ಪ್ರಶ್ನೆಗೂ ಬೇಗ ಉತ್ತರ ಸಿಗಲಿದೆ.