ಎಸ್ ಆರ್ ಎಚ್- ಜಿಟಿ ಪಂದ್ಯ ಮಳೆಗೆ ಆಹುತಿ; ನಾಲ್ಕು ತಂಡಗಳ ಪ್ಲೇಆಫ್ ಕನಸಿನ ಮೇಲೆ ಪರಿಣಾಮ ಏನು?
ಹೊಸದಿಲ್ಲಿ: ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಪ್ಲೇಆಫ್ ಹಂತ ತಲುಪಿದ ಮೂರನೇ ತಂಡವಾಗಿ ಗುರುವಾರ ಸನ್ ರೈಸರ್ಸ್ ಹೈದ್ರಾಬಾದ್ ದಾಖಲಾಗಿದೆ. 13 ಪಂದ್ಯಗಳಿಂದ 15 ಅಂಕ ಸಂಪಾದಿಸಿದ ಪ್ಯಾಟ್ ಕಮಿನ್ಸ್ ಪಡೆಯ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯ ಗುರುವಾರ ಹೈದ್ರಾಬಾದ್ ನಲ್ಲಿ ಮಳೆಯಿಂದ ಕೊಚ್ಚಿಹೋಗಿದೆ. ಇದರಿಂದಾಗಿ 13 ಪಂದ್ಯಗಳಿಂದ 19 ಅಂಕ ಪಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ 13 ಪಂದ್ಯಗಳಿಂದ 16 ಅಂಕ ಸಂಪಾದಿಸಿದ ರಾಜಸ್ಥಾನ ರಾಯಲ್ಸ್ ಜತೆಗೆ ಅಂತಿಮ ನಾಲ್ಕರ ಹಂತ ಪ್ರವೇಶಿಸಿದೆ. ಎಸ್ ಆರ್ ಎಚ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಪಿಬಿಕೆಎಸ್ ವಿರುದ್ಧ ಭಾನುವಾರ ಆಡಲಿದೆ.
ನಾಲ್ಕು ತಂಡಗಳ ಪೈಕಿ ಪ್ಲೇಆಫ್ ಗೆ ತೇರ್ಗಡೆಯಾಗುವ ಮೂರು ತಂಡಗಳು ದೃಢಪಟ್ಟಿದ್ದು, ಕೊನೆಯ ಸ್ಥಾನಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್, ಆರ್ಸಿಬಿ, ಲಕ್ನೋ ಸೂಪರ್ ಜೈಂಟ್ಸ್ ನಡುವೆ ಪೈಪೋಟಿ ಇದೆ. ಇದರಲ್ಲೂ ಸಿಎಸ್ ಕೆ ಮತ್ತು ಆರ್ ಸಿಬಿ ನಡುವೆ ನೈಜ ಕದನ ಏರ್ಪಟ್ಟಿದೆ. ಎಲ್ಎಸ್ ಜಿಗೆ ಮುಂದಿನ ಹಂತಕ್ಕೇರುವ ಗಣಿತಾತ್ಮಕ ಅವಕಾಶ ಮಾತ್ರ ಉಳಿದಿದೆ.
ಋತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್ ಕೆ 13 ಪಂದ್ಯಗಳಿಂದ 14 ಅಂಕ ಪಡೆದು ಪ್ಲೇಆಫ್ ರೇಸ್ ನಲ್ಲಿ ಮುಂಚೂಣಿಯಲ್ಲಿದೆ. ಇದರ ನಿವ್ವಳ ರನ್ ರೇಟ್ 0.528ರಷ್ಟಿದೆ. ಆರ್ ಸಿಬಿ ವಿರುದ್ಧ ಒಂದು ಪಂದ್ಯ ಸಿಎಸ್ ಕೆಗೆ ಬಾಕಿ ಇದೆ. ಶನಿವಾರದ ಪಂದ್ಯದಲ್ಲಿ ಆರ್ ಸಿಬಿಯನ್ನು ಸೋಲಿಸಿದಲ್ಲಿ ಚೆನ್ನೈ ಹಾದಿ ಸುಗಮ. ಒಂದು ವೇಳೆ ಆರ್ ಆರ್ ಮತ್ತು ಎಸ್ ಆರ್ ಎಚ್ ತಮ್ಮ ಕೊನೆಯ ಪಂದ್ಯವನ್ನು ಕ್ರಮವಾಗಿ ಕೆಕೆಆರ್ ಹಾಗೂ ಪಿಕೆಬಿಎಸ್ ವಿರುದ್ಧ ಸೋತಲ್ಲಿ ಉತ್ತಮ ರನ್ ರೇಟ್ ಹೊಂದಿರುವ ಸಿಎಸ್ ಕೆಗೆ ಅಗ್ರ ಎರಡರಲ್ಲೂ ಸ್ಥಾನ ಪಡೆಯುವ ಅವಕಾಶ ಇದೆ.
ಆರ್ಸಿಬಿ ವಿರುದ್ಧ ಸೋತರೂ ಸಿಎಸ್ ಕೆಗೆ ಮುನ್ನಡೆಯುವ ಅವಕಾಶ ಇದೆ. ಆದರೆ ದೊಡ್ಡ ಅಂತರದ ಸೋಲು ಕಾಣಬಾರದು. ಆರ್ ಸಿಬಿಗಿಂತ ಅಧಿಕ ನಿವ್ವಳ ರನ್ ರೇಟ್ ಕಾಪಾಡಿಕೊಂಡರೆ ಸಿಎಸ್ ಕೆ ಮುಂದಿನ ಹಂತ ತಲುಪಲಿದೆ.
ಇನ್ನೊಂದೆಡೆ ಫಾಫ್ ಡುಪ್ಲೇಸಿಸ್ ನೇತೃತ್ವದ ಆರ್ ಸಿಬಿಗೂ ಪ್ಲೇಆಫ್ ಹಂತಕ್ಕೇರುವ ಅವಕಾಶದ ಬಾಗಿಲು ಮುಚ್ಚಿಲ್ಲ. 13 ಪಂದ್ಯಗಳಿಂದ 12 ಅಂಕ ಗಳಿಸಿರುವ ತಂಡ 0.387 ನಿವ್ವಳ ರನ್ರೇಟ್ ಹೊಂದಿದೆ. ಆದರೆ ಸಿಎಸ್ ಕೆ ವಿರುದ್ಧದ ಪಂದ್ಯದಲ್ಲಿ ದೊಡ್ಡ ಅಂತರದಿಂದ ಜಯ ಸಾಧಿಸಿದಲ್ಲಿ ಮಾತ್ರ ಆರ್ ಸಿಬಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯಬಲ್ಲದು.