ಸಚಿನ್ ತೆಂಡುಲ್ಕರ್ ದಾಖಲೆ ಮುರಿಯುವ ಹಾದಿಯಲ್ಲಿ ಯಶಸ್ವಿ ಜೈಸ್ವಾಲ್
ಅಡಿಲೇಡ್: ಟೀಮ್ ಇಂಡಿಯಾವು ಆಸ್ಟ್ರೇಲಿಯ ಕ್ರಿಕೆಟ್ ತಂಡದ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದು, ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್‌ರ ದಾಖಲೆಯನ್ನು ಮುರಿಯುವ ಹಾದಿಯಲ್ಲಿದ್ದಾರೆ.
22ರ ವಯಸ್ಸಿನ ಜೈಸ್ವಾಲ್ ಈಗಾಗಲೇ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಪರ್ತ್‌ನಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 161 ರನ್ ಸಿಡಿಸಿ ಆಸ್ಟ್ರೇಲಿಯ ನೆಲದಲ್ಲಿ ಮಿಂಚುವ ಮೊದಲು ಯುವ ಆಟಗಾರ ವರ್ಷದ ಹೆಚ್ಚಿನ ಅವಧಿಯಲ್ಲಿ ತಾಯ್ನಾಡಿನಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ.
ಜೈಸ್ವಾಲ್ ಈ ವರ್ಷ ಈವರೆಗೆ 1,280 ರನ್ ಗಳಿಸಿದ್ದು, ಇದರಲ್ಲಿ ಮೂರು ಶತಕ ಹಾಗೂ 7 ಅರ್ಧಶತಕಗಳಿವೆ. 58.18ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಜೈಸ್ವಾಲ್ ಔಟಾಗದೆ 214 ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.
ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯ ಆಟಗಾರ ಎನಿಸಿಕೊಂಡು ಸಚಿನ್ ತೆಂಡುಲ್ಕರ್‌ರ ದಾಖಲೆಯನ್ನು ಮುರಿಯಲು ಮುಂಬೈ ಆಟಗಾರ ಜೈಸ್ವಾಲ್‌ಗೆ ಇನ್ನು ಕೇವಲ 282 ರನ್ ಅಗತ್ಯವಿದೆ.
ಸಚಿನ್ ಅವರು 2010ರಲ್ಲಿ 14 ಟೆಸ್ಟ್ ಪಂದ್ಯಗಳಲ್ಲಿ 23 ಇನಿಂಗ್ಸ್‌ಗಳಲ್ಲಿ 7 ಶತಕ ಹಾಗೂ 5 ಅರ್ಧಶತಕಗಳ ಸಹಿತ ಒಟ್ಟು 1,562 ರನ್ ಕಲೆ ಹಾಕಿದ್ದರು. 214 ಗರಿಷ್ಠ ಸ್ಕೋರ್ ಆಗಿತ್ತು.
ಪಾಕಿಸ್ತಾನದ ಮಾಜಿ ಬ್ಯಾಟಿಂಗ್ ಸ್ಟಾರ್ ಮುಹಮ್ಮದ್ ಯೂಸುಫ್ 2006ರಲ್ಲಿ 99.33ರ ಸರಾಸರಿಯಲ್ಲಿ 11 ಪಂದ್ಯಗಳು ಹಾಗೂ 19 ಇನಿಂಗ್ಸ್‌ಗಳಲ್ಲಿ 1,788 ರನ್ ಗಳಿಸಿದ್ದು, ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಟೆಸ್ಟ್ ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. 9 ಶತಕಗಳು ಹಾಗೂ 3 ಅರ್ಧಶತಕಗಳನ್ನು ಗಳಿಸಿದ್ದ ಯೂಸುಫ್‌ರ ಗರಿಷ್ಠ ವೈಯಕ್ತಿಕ ಸ್ಕೋರ್ 202.