IPL 2025 | ಪಂದ್ಯದ ನಡುವೆ ಅಭಿಷೇಕ್ ಶರ್ಮಾ ಜೇಬು ಪರೀಕ್ಷಿಸಿದ ಸೂರ್ಯಕುಮಾರ್ ಯಾದವ್; ಕಾರಣವೇನು?

PC : X
ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ನಡುವೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್, ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ ಅಭಿಷೇಕ್ ಶರ್ಮಾರ ಜೇಬು ಪರೀಕ್ಷಿಸಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕೇವಲ 28 ಬಾಲ್‌ಗಳಲ್ಲಿ 40 ರನ್ ಗಳಿಸಿ ಆಟವಾಡುತ್ತಿದ್ದಾಗ ಸೂರ್ಯಕುಮಾರ್ ಯಾದವ್ ಜೇಬು ಪರೀಕ್ಷಿಸಿದ್ದಾರೆ. ಅದೇ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಎಸೆದ ಬಾಲ್‌ಗೆ ಅಭಿಷೇಕ್ ಶರ್ಮಾ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್‌ಗೆ ಮರಳಿದರು.
Surya Kumar yadav checking Abhishek Sharma Pockets last match century taruwatha raaskoni vachina slip chupinchaadu gapic.twitter.com/mc4jcpEHBv
— MR. Haji (@always_Mega_fan) April 17, 2025
ಪಂಜಾಬ್ ಕಿಂಗ್ಸ್ ತಂಡದ ಎದುರಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 55 ಬಾಲ್‌ಗಳಲ್ಲಿ ಅಮೋಘ 141 ರನ್ ಸಿಡಿಸಿದ್ದರು. ಪಂದ್ಯದ ನಂತರ ಮಾತನಾಡಿದ್ದ ಅಭಿಷೇಕ್ ಶರ್ಮ, ಭಾರತೀಯ ಟಿ-20 ತಂಡದ ನಾಯಕ ಸೂರ್ಯಕುಮಾರ್ ಯಾದವ್‌ರ ಪ್ರೋತ್ಸಾಹದಿಂದ ನಾನು ಈ ಹಂತಕ್ಕೆ ಬೆಳೆಯುವಂತಾಗಿದೆ ಎಂದು ಕೃತಜ್ಞತೆ ಸಲ್ಲಿಸಿದ್ದರು. ಅಲ್ಲದೆ, ಕಾಗದದ ಚೀಟಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೆಂಬಲಿಗರಿಗೆ ಧನ್ಯವಾದ ಬರೆದು, ಅದನ್ನು ಕ್ರೀಡಾಂಗಣದಲ್ಲಿ ಪ್ರದರ್ಶಿಸಿದ್ದರು. ಬಹುಶಃ ಸೂರ್ಯಕುಮಾರ್ ಯಾದವ್ ಅದೇ ಚೀಟಿಗಾಗಿ ಅಭಿಷೇಕ್ ಶರ್ಮಾರ ಜೇಬು ತಡಕಾಡಿರಬಹುದು ಎಂಬ ಹಾಸ್ಯಚಟಾಕಿ ಕ್ರಿಕೆಟ್ ಪ್ರೇಮಿಗಳಿಂದ ಕೇಳಿ ಬರುತ್ತಿದೆ.
ಇದಕ್ಕೂ ಮುನ್ನ, ಮೊದಲು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಅಭಿಷೇಕ್ ಶರ್ಮ (40) ಹಾಗೂ ಹೆನ್ರಿಕ್ ಕ್ಲಾಸೆನ್ (37) ಹೊರತುಪಡಿಸಿ, ಉಳಿದೆಲ್ಲ ಬ್ಯಾಟರ್‌ಗಳು ವಿಫಲಗೊಂಡಿದ್ದರಿಂದ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಲಷ್ಟೆ ಶಕ್ತವಾಯಿತು. ಅದಕ್ಕೆ ಪ್ರತಿಯಾಗಿ, ಮುಂಬೈ ಇಂಡಿಯನ್ಸ್ ತಂಡವು ಕೇವಲ 18.1 ಓವರ್‌ಗಳಲ್ಲಿ ಗೆಲುವಿನ ಗುರಿ ದಾಟಿತು. ಮುಂಬೈ ಇಂಡಿಯನ್ಸ್ ತಂಡದ ಆಕ್ರಮಣಕಾರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೇವಲ 15 ಎಸೆತಗಳಲ್ಲಿ 26 ರನ್ ಗಳಿಸಿ ಗಮನ ಸೆಳೆದರು.