ವೇಗವಾಗಿ 4,000 ರನ್ ಪೂರೈಸಿ ಇತಿಹಾಸ ನಿರ್ಮಿಸಿದ ಸೂರ್ಯಕುಮಾರ್

Update: 2025-04-27 23:24 IST
ವೇಗವಾಗಿ 4,000 ರನ್ ಪೂರೈಸಿ ಇತಿಹಾಸ ನಿರ್ಮಿಸಿದ ಸೂರ್ಯಕುಮಾರ್
PC - IPL
  • whatsapp icon

ಹೊಸದಿಲ್ಲಿ: ಭಾರತೀಯ ಪ್ರೀಮಿಯರ್ ಲೀಗ್(ಐಪಿಎಲ್)ಇತಿಹಾಸದಲ್ಲಿ ವೇಗವಾಗಿ 4,000 ರನ್ ಪೂರೈಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.

ವಾಂಖೆಡೆ ಸ್ಟೇಡಿಯಮ್ನಲ್ಲಿ ರವಿವಾರ ನಡೆದ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದರು.

ಸೂರ್ಯಕುಮಾರ್ ಕೇವಲ 2,705 ಎಸೆತಗಳಲ್ಲಿ ಈ ಮೈಲಿಗಲ್ಲ್ಲು ತಲುಪಿದ್ದು, 147.87 ಸ್ಟ್ರೈಕ್ರೇಟ್ ಕಾಯ್ದುಕೊಂಡಿದ್ದಾರೆ. ಈ ಸಾಧನೆಯ ಮೂಲಕ ಸೂರ್ಯಕುಮಾರ್ ಅವರು ಸಾರ್ವಕಾಲಿಕ ಶ್ರೇಷ್ಠ ಅಟಗಾರರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಲೆಜೆಂಡರಿ ಕ್ರಿಸ್ ಗೇಲ್(2,653 ಎಸೆತ)ಹಾಗೂ ಎಬಿ ಡಿ ವಿಲಿಯರ್ಸ್(2,658 ಎಸೆತ)ಮೊದಲೆರಡು ಸ್ಥಾನದಲ್ಲಿದ್ದಾರೆ. ಭಾರತೀಯರ ಪೈಕಿ ಈ ಸಾಧನೆ ಮಾಡಿದ ಏಕೈಕ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ತನ್ನ ಐಪಿಎಲ್ ವೃತ್ತಿಜೀವನದಲ್ಲಿ ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳನ್ನು ಪ್ರತಿನಿಧಿಸಿರುವ ಸೂರ್ಯಕುಮಾರ್ ಒಟ್ಟು 160 ಪಂದ್ಯಗಳನ್ನು ಆಡಿದ್ದು 34ರ ಸರಾಸರಿಯಲ್ಲಿ, ಸುಮಾರು 150ರ ಸ್ಟ್ರೈಕ್ರೇಟ್ನಲ್ಲಿ 4,201 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು ಹಾಗೂ 27 ಅರ್ಧಶತಕಗಳಿದ್ದವು.

ಮುಂಬೈ ಇಂಡಿಯನ್ಸ್ ಈ ವರ್ಷದ ಐಪಿಎಲ್ನಲ್ಲಿ ಸತತ 4 ಪಂದ್ಯಗಳಲ್ಲಿ ಜಯ ಸಾಧಿಸಿ ಮರು ಹೋರಾಟ ನೀಡುವಲ್ಲಿ ಸೂರ್ಯಕುಮಾರ್ ಅವರ ಫಾರ್ಮ್ ನಿರ್ಣಾಯಕವಾಗಿದೆ. 170ರ ಸ್ಟ್ರೈಕ್ರೇಟ್ನಲ್ಲಿ ಹಾಗೂ 60ಕ್ಕೂ ಅಧಿಕ ಸರಾಸರಿಯಲ್ಲಿ 400ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಇದೀಗ ಗುಜರಾತ್ ಟೈಟಾನ್ಸ್ ತಂಡದ ಸಾಯಿ ಸುದರ್ಶನ್(417ರನ್)ದಾಖಲೆಯನ್ನು ಮುರಿದು ಆರೆಂಜ್ ಕ್ಯಾಪ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಸೂರ್ಯಕುಮಾರ್(54 ರನ್, 28 ಎಸೆತ, 4 ಸಿಕ್ಸರ್,4 ಬೌಂಡರಿ)ಅರ್ಧಶತಕದ ಬಲದಿಂದ ಮುಂಬೈ ತಂಡವು ಲಕ್ನೊ ವಿರುದ್ಧ 7 ವಿಕೆಟ್ಗಳ ನಷ್ಟಕ್ಕೆ 215 ರನ್ ಗಳಿಸಿದೆ. ಸೂರ್ಯಕುಮಾರ್ ಈ ಋತುವಿನಲ್ಲಿ 10 ಪಂದ್ಯಗಳಲ್ಲಿ 3 ಅರ್ಧಶತಕಗಳ ಸಹಿತ ಒಟ್ಟು 427 ರನ್ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News