ಸೈಯದ್ ಮೋದಿ ಇಂಟರ್‌ನ್ಯಾಶನಲ್ ಸೂಪರ್ 300 ಬ್ಯಾಡ್ಮಿಂಟನ್ ಪಂದ್ಯಾವಳಿ | ಸಿಂಧೂ, ಲಕ್ಷ್ಯ ಸೆಮಿಫೈನಲ್‌ಗೆ ಲಗ್ಗೆ

Update: 2024-11-29 15:27 GMT

ಪಿ.ವಿ. ಸಿಂಧೂ | PC : PTI 

ಲಕ್ನೋ : ಲಕ್ನೋದಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಸೂಪರ್ 300 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಶುಕ್ರವಾರ ಪಿ.ವಿ. ಸಿಂಧೂ ಮತ್ತು ಲಕ್ಷ್ಯ ಸೇನ್ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್‌ಗಳಲ್ಲಿ ಸೆಮಿಫೈನಲ್ ತಲುಪಿದ್ದಾರೆ.

ಅಗ್ರ ಶ್ರೇಯಾಂಕದ, ಎರಡು ಬಾರಿಯ ಚಾಂಪಿಯನ್ (2017 ಮತ್ತು 2022) ಸಿಂಧೂ, ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಚೀನಾದ ಡಾಯಿ ವಾಂಗ್‌ರನ್ನು 21-15, 21-17 ನೇರ ಗೇಮ್‌ಗಳಿಂದ ಸೋಲಿಸಿದರು. ಪಂದ್ಯವು 48 ನಿಮಿಷಗಳಲ್ಲಿ ಕೊನೆಗೊಂಡಿತು.

ಅದೇ ವೇಳೆ, 2021ರ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ತನ್ನದೇ ದೇಶದ ಮೈರಬ ಲುವಾಂಗ್ ಮೈಸ್ನಮ್‌ರನ್ನು 21-8, 21-19 ಗೇಮ್‌ಗಳಿಂದ ಸುಲಭವಾಗಿ ಪರಾಭವಗೊಳಿಸಿದರು.

‘‘ಇಂದಿನ ಪಂದ್ಯವು ಮಹತ್ವದ್ದಾಗಿತ್ತು. ಅವರು ಕೆಳ ರ‍್ಯಾಂಕಿಂಗ್‌ನ ಆಟಗಾರ್ತಿಯಾದರೂ, ಹಾಗೆ ಅನಿಸಲಿಲ್ಲ. ನಾನು ನಿನ್ನೆ ಮಾಡಿರುವ ತಪ್ಪುಗಳನ್ನು ಇಂದು ತಿದ್ದಿಕೊಂಡೆ. ನಿನ್ನೆ ಎಲ್ಲಿ ಎಡವಿದೆನೋ ಅದನ್ನು ಇಂದು ಪುನರಾವರ್ತಿಸಲಿಲ್ಲ. ನಾನು ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದೆ. ಒಟ್ಟಾರೆಯಾಗಿ ಹೇಳುವುದಾದರೆ, ನಿನ್ನೆಯ ಆಟಕ್ಕೆ ಹೋಲಿಸಿದರೆ ಇಂದಿನ ನನ್ನ ಆಟದ ಬಗ್ಗೆ ತೃಪ್ತಿ ಇದೆ’’ ಎಂದು ಸಿಂಧೂ ಹೇಳಿದರು.

ಸಿಂಧೂ ವಿಶ್ವ ರ‍್ಯಾಂಕಿಂಗ್‌ನಲ್ಲಿ 18ನೇ ಸ್ಥಾನ ಹೊಂದಿದ್ದರೆ, ವಾಂಗ್ 118ನೇ ಸ್ಥಾನದಲ್ಲಿದ್ದಾರೆ.

ಸೆಮಿಫೈನಲ್‌ನಲ್ಲಿ, ಸಿಂಧೂ ತನ್ನದೇ ದೇಶದ ಉನ್ನತಿ ಹೂಡ ಅವರನ್ನು ಎದುರಿಸಲಿದ್ದಾರೆ. ಅದೇ ವೇಳೆ, ಲಕ್ಷ್ಯ ಸೇನ್ ಸೆಮಿಫೈನಲ್‌ನಲ್ಲಿ ಜಪಾನ್‌ನ ಶೊಗೊ ಒಗವ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ.

ಇನ್ನೊಂದು ಮಹಿಳಾ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ, 2022ರ ಒಡಿಶಾ ಓಪನ್ ಪ್ರಶಸ್ತಿ ವಿಜೇತೆ ಉನ್ನತಿ ಹೂಡ ಅಮೆರಿಕದ ಇಶಿಕಾ ಜೈಸ್ವಾಲ್‌ರನ್ನು 21-16, 21-9 ಗೇಮ್‌ಗಳಿಂದ ಹಿಮ್ಮೆಟ್ಟಿಸಿದರು.

ಎರಡನೇ ಶ್ರೇಯಾಂಕದ ಮಹಿಳಾ ಡಬಲ್ಸ್ ಆಟಗಾರ್ತಿಯರಾದ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ತಮ್ಮ ಪ್ರಭಾವಿ ಆಟವನ್ನು ಮುಂದುವರಿಸಿದ್ದಾರೆ. ಅವರು ಮಹಿಳಾ ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಆರನೇ ಶ್ರೇಯಾಂಕದ ಜೋಡಿ ಗೋ ಪೈ ಕೀ ಮತ್ತು ಟೆವೋ ಮೇ ಕ್ಸಿಂಗ್‌ರನ್ನು 21-8, 21-15 ಗೇಮ್‌ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮಿಶ್ರ ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ, ಐದನೇ ಶ್ರೇಯಾಂಕದ ಧ್ರುವ ಕಪಿಲ ಮತ್ತು ತನಿಶಾ ಕ್ರಾಸ್ಟೊ ಮಲೇಶ್ಯದ ಲೂ ಬಿಂಗ್ ಕುನ್ ಮತ್ತು ಹೊ ಲೊ ಈ ಜೋಡಿಯನ್ನು 21-16, 21-13 ಗೇಮ್‌ಗಳಿಂದ ಮಣಿಸಿ ಸೆಮಿಫೈನಲ್‌ಗೆ ತೇರ್ಗಡೆಗೊಂಡರು.

ಇನ್ನೊಂದು ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ, ಎಂಟನೇ ಶ್ರೇಯಾಂಕದ ಆಯುಶ್ ಶೆಟ್ಟಿಯನ್ನು ಜಪಾನ್‌ನ ಶೊಗೊ ಒಗಾವ 21-7, 21-14 ಗೇಮ್‌ಗಳಿಂದ ಸೋಲಿಸಿದರು.

ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ಗಳಲ್ಲಿ, ಭಾರತದ ತಸ್ನೀಮ್ ಮಿರ್ ಮತ್ತು ಶ್ರೀಯಾಂಶಿ ವಾಲಿಶೆಟ್ಟಿ ಸೋತು ಕೂಟದಿಂದ ನಿರ್ಗಮಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News