ಟಿ-20 ಕ್ರಿಕೆಟ್: 3,000 ರನ್ ಗಳಿಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟರ್ ಬಟ್ಲರ್
ಬರ್ಮಿಂಗ್‌ಹ್ಯಾಮ್ : ನಾಯಕ ಜೋಸ್ ಬಟ್ಲರ್ ಟಿ-20 ಕ್ರಿಕೆಟ್‌ನಲ್ಲಿ 3,000 ರನ್ ಪೂರೈಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟರ್ ಎನಿಸಿಕೊಳ್ಳುವ ಮೂಲಕ ಮಹತ್ವದ ಮೈಲಿಗಲ್ಲು ತಲುಪಿದರು.
ಪಾಕಿಸ್ತಾನ ವಿರುದ್ಧ 2ನೇ ಟಿ-20 ಪಂದ್ಯದಲ್ಲಿ 52 ಎಸೆತಗಳಲ್ಲಿ 84 ರನ್ ಗಳಿಸಿದ ಬಟ್ಲರ್ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ಈ ಸಾಧನೆಯ ಮೂಲಕ ಬಟ್ಲರ್ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಅತ್ಯಂತ ಪ್ರಮುಖ ಆಟಗಾರನ ಪೈಕಿ ಒಬ್ಬರಾಗಿ ಹೊರಹೊಮ್ಮಿದರು. ಬಟ್ಲರ್ ಅವರ ಸ್ಥಿರ ಪ್ರದರ್ಶನ ಹಾಗೂ ನಾಯಕತ್ವದ ಕೌಶಲ್ಯವು ಇಂಗ್ಲೆಂಡ್ ತಂಡ ಟಿ-20 ಕ್ರಿಕೆಟ್‌ನಲ್ಲಿ ಯಶಸ್ಸು ಗಳಿಸಲು ಮುಖ್ಯ ಅಂಶವಾಗಿದೆ.
115 ಟಿ-20 ಪಂದ್ಯಗಳಲ್ಲಿ ಬಟ್ಲರ್ 35.42ರ ಸರಾಸರಿಯಲ್ಲಿ 145.10ರ ಸ್ಟ್ರೈಕ್‌ರೇಟ್‌ನಲ್ಲಿ 3,011 ರನ್ ಗಳಿಸಿದ್ದಾರೆ. 1 ಶತಕ ಹಾಗೂ 23 ಅರ್ಧಶತಕಗಳನ್ನು ಗಳಿಸಿದ್ದಾರೆ. ಔಟಾಗದೆ 101 ಗರಿಷ್ಠ ಸ್ಕೋರಾಗಿದೆ. ಟಿ-20 ಕ್ರಿಕೆಟ್‌ನಲ್ಲಿ ಬಟ್ಲರ್ 9ನೇ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.
ಮಾಜಿ ನಾಯಕ ಇಯಾನ್ ಮೊರ್ಗನ್(115 ಪಂದ್ಯ, 2,458 ರನ್)ಇಂಗ್ಲೆಂಡ್‌ನ ಪರ ಗರಿಷ್ಠ ಟಿ-20 ರನ್ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.