ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಸುಲಭ ಗೆಲುವು

Update: 2024-06-09 03:44 GMT

ಬಾರ್ಬಡೋಸ್: ಡೇವಿಡ್ ವಾರ್ನರ್ ಅವರ ಅಮೋಘ ಬ್ಯಾಟಿಂಗ್ ಮತ್ತು ಆಡಂ ಝಂಪಾ ಅವರ ಉತ್ತಮ ಬೌಲಿಂಗ್ ನೆರವಿನಿಂದ ಟಿ20 ವಿಶ್ವಕಪ್ ನ ಬಿ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಶನಿವಾರ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 36 ರನ್ ಅಂತರದಿಂದ ಸೋಲಿಸಿತು.

ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಆಟಗಾರರು ತಮ್ಮ ಬ್ಯಾಟಿಂಗ್ ಶಕ್ತಿಯನ್ನು ಪ್ರದರ್ಸಿಸಿ, ಪ್ರಸಕ್ತ ಟೂರ್ನಿಯಲ್ಲಿ 200ರ ಗಡಿ ದಾಟಿದ ಮೊದಲ ತಂಡ ಎನಿಸಿಕೊಂಡಿತು. ಬ್ರಿಡ್ಜ್ ಟೌನ್ ನ ಕೆನ್ಸಿಂಗ್ಟನ್ ನಲ್ಲಿ  ನಡೆದ ಪಂದ್ಯದಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಗಳನ್ನು ಕಲೆ ಹಾಕಿತು. ಉತ್ತಮ ಆರಂಭ ನೀಡಿದ ವಾರ್ನರ್ ಹಾಗೂ ಟ್ರಾವಿಸ್ ಹೆಡ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ವಾರ್ನರ್ ನಾಲ್ಕು ಸಿಕ್ಸರ್ ಹಾಗೂ 2 ಬೌಂಡರಿ ಒಳಗೊಂಡಂತೆ 16 ಎಸೆತಗಳಲ್ಲಿ 39 ರನ್ ಗಳಿಸಿದರೆ, ಹೆಡ್ 18 ಎಸೆತಗಳಲ್ಲಿ 34 ರನ್ ಸಿಡಿಸಿದರು. ಈ ಸ್ಫೋಟಕ ಬ್ಯಾಟಿಂಗ್ ನಿಂದಾಗಿ ಪವರ್ ಪ್ಲೇ ಅಂತ್ಯಕ್ಕೆ ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತು.

ಮೊಯಿನ್ ಅಲಿ ವಾರ್ನರ್ ಅವರನ್ನು ಹಾಗೂ ಜೋಫ್ರಾ ಆರ್ಚರ್ ಹೆಡ್ ಅವರನ್ನು ಪೆವಿಲಿಯನ್ ಗೆ ಕಳುಹಿಸುವ ಮೂಲಕ ಇಂಗ್ಲೆಂಡ್ ಬೌಲರ್ ಗಳು ಪ್ರತಿಹೋರಾಟ ಸಂಘಟಿಸಿದರು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಕೂಡಾ ಪವರ್ ಪ್ಲೇಯಲ್ಲಿ ವಿಕೆಟ್ ನಷ್ಟವಿಲ್ಲದೇ 54 ರನ್ ಗಳಿಸಿತು. ಮೊಯಿನ್ ಅಲಿ 14ನೇ ಓವರ್ ನಲ್ಲಿ ಮೂರು ಸಿಕ್ಸರ್ ಸಿಡಿಸುವ ಮೂಲಕ 15 ಎಸೆತಗಳಲ್ಲಿ 25 ರನ್ ಗಳಿಸಿ ಇಂಗ್ಲೆಂಡ್ ಆಸೆಯನ್ನು ಜೀವಂತ ಇರಿಸಿದರು. ಆದರೆ 16ನೇ ಓವರ್ ನಲ್ಲಿ ಅವರು ಔಟ್ ಆಗುವ ಮೂಲಕ 128ಕ್ಕೆ 5 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು.

ಜೋಸ್ ಬಟ್ಲರ್ 28 ಎಸೆತಗಳಲ್ಲಿ 42 ರನ್ ಗಳಿಸಿದರೂ, 20 ಓವರ್ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಗೆಲುವಿನೊಂದಿಗೆ ಬಿ ಗುಂಪಿಯಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನ ಭದ್ರಪಡಿಸಿಕೊಂಡರೆ, ಇಂಗ್ಲೆಂಡ್ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News