ಟಿ20 ವಿಶ್ವಕಪ್ | ಪಿಚ್ ಬಗ್ಗೆ ಕಳವಳ : ನ್ಯೂಯಾರ್ಕಿನಿಂದ ಪಂದ್ಯಗಳನ್ನು ಸ್ಥಳಾಂತರಿಸುವ ಯೋಜನೆ ಇಲ್ಲ ಎಂದ ಐಸಿಸಿ

Update: 2024-06-06 16:46 GMT

PC : @ICC

ಹೊಸದಿಲ್ಲಿ: ಟಿ20 ವಿಶ್ವಕಪ್ ಗಾಗಿ ನ್ಯೂಯಾರ್ಕ್ ನ ನಾಸ್ಸೌ ಕೌಂಟಿ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್ ನಲ್ಲಿನ ಪಿಚ್ ಗಳ ಪರಿಸ್ಥಿತಿಯ ಬಗ್ಗೆ ಕಳವಳ ಹೆಚ್ಚಾಗುತ್ತಿರುವ ಹೊರತಾಗಿಯೂ ಉಳಿದ ಪಂದ್ಯಗಳನ್ನು ಪರ್ಯಾಯ ಸ್ಟೇಡಿಯಮ್ ಗಳಿಗೆ ಸ್ಥಳಾಂತರಿಸುವ ಕುರಿತು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಯಾವುದೇ ಯೋಜನೆ ಹಾಕಿಕೊಂಡಿಲ್ಲ.

ನ್ಯೂಯಾರ್ಕ್ನ ಪಿಚ್ ಗಳು ಟಿ20 ಟೂರ್ನಮೆಂಟ್ ತನಕ ಪರೀಕ್ಷೆಗೆ ಒಳಗಾಗಿರಲಿಲ್ಲ. ಬೌಲರ್ ಗಳಿಗೆ ಹೆಚ್ಚು ನೆರವಾಗುತ್ತಿರುವ ಪಿಚ್ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 77 ರನ್ ಗೆ ಆಲೌಟಾಗಿತ್ತು. ಭಾರತ ತಂಡ ಇದೇ ಪಿಚ್ನಲ್ಲಿ ಐರ್ಲ್ಯಾಂಡ್ ತಂಡವನ್ನು ಕೇವಲ 96 ರನ್ ಗೆ ನಿಯಂತ್ರಿಸಿತ್ತು. ಅನಿರೀಕ್ಷಿತ ಬೌನ್ಸ್ ಹಾಗೂ ಪಿಚ್ ಗಳ ವರ್ತನೆಯು ಆಟಗಾರರ ಸುರಕ್ಷತೆಯ ಬಗ್ಗೆ ಕಳವಳ ಹುಟ್ಟುಹಾಕಿದೆ.

ಪಿಚ್ ಪರಿಸ್ಥಿತಿಯ ಬಗ್ಗೆ ಭಾರತೀಯ ಕ್ರಿಕೆಟ್ ತಂಡ ಖಾಸಗಿಯಾಗಿ ಅತೃಪ್ತಿ ವ್ಯಕ್ತಪಡಿಸಿದೆ. ತನ್ನ ಬ್ಯಾಟರ್ ಗಳ ಸುರಕ್ಷತೆಯ ಬಗ್ಗೆ ಚಿಂತೆಯನ್ನು ವ್ಯಕ್ತಪಡಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.

ಭಾರತವು ಇದೇ ಮೈದಾನದಲ್ಲಿ ರವಿವಾರ ಗ್ರೂಪ್ ಎ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಸಂಭಾವ್ಯ ಕ್ರಮಗಳನ್ನು ನಿರ್ಧರಿಸಲು ಐಸಿಸಿ ಹಿಂದಿನ ಪಂದ್ಯಗಳ ಅಂಕಿ-ಅಂಶಗಳನ್ನು ಅವಲೋಕಿಸಿದೆ. ಆದರೆ, ನ್ಯೂಯಾರ್ಕ್ನಲ್ಲಿ ನಿಗದಿಯಾಗಿರುವ ಪಂದ್ಯಗಳನ್ನು ಫ್ಲೋರಿಡಾ ಅಥವಾ ಟೆಕ್ಸಾಸ್ಗೆ ಸ್ಥಳಾಂತರಿಸುವ ಯೋಜನೆ ಇಲ್ಲ ಎಂದು ಅದು ಹೇಳಿದೆ. ಈ ಎರಡು ತಾಣಗಳು ನೈಜ ಪಿಚ್ ಗಳನ್ನು ಹೊಂದಿವೆ.

ನ್ಯೂಯಾರ್ಕ್ ಕ್ರೀಡಾಂಗಣವನ್ನು ಟಿ20 ವಿಶ್ವಕಪ್ಗೋಸ್ಕರ ನಿರ್ಮಿಸಲಾಗಿದೆ. ಆಸ್ಟ್ರೇಲಿಯದಿಂದ ಆಮದು ಮಾಡಲಾಗಿರುವ ಹುಲ್ಲು ಹಾಸಿನ ಪಿಚ್ ಗಳನ್ನು ಟೂರ್ನಮೆಂಟ್ ಆರಂಭವಾಗುವ ಕೆಲವೇ ವಾರಗಳ ಮೊದಲು ಅಳವಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News