ಶ್ರೀಲಂಕಾ ತಲುಪಿದ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ;‌ ಗಂಭೀರ್ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭ

Update: 2024-07-23 18:28 GMT

ಗೌತಮ್ ಗಂಭೀರ್ | PC: X  

ಕೊಲಂಬೊ: ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ಪುರುಷರ ಕ್ರಿಕೆಟ್ ತಂಡ ಮುಂಬೈನಿಂದ ಕೊಲಂಬೊ ಮಾರ್ಗವಾಗಿ ಪಲ್ಲೆಕೆಲೆಗೆ ಸೋಮವಾರ ತಲುಪಿದ್ದು ಇತ್ತೀಚೆಗೆ ಟಿ20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾಕ್ಕೆ ದ್ವೀಪರಾಷ್ಟ್ರದಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು.

ಹೊಸ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಂತರ 15 ಸದಸ್ಯರ ಭಾರತ ತಂಡವು ಸಹಾಯಕ ಸಿಬ್ಬಂದಿಯ ಜೊತೆಗೆ ಮುಂಬೈನಿಂದ ನಿರ್ಗಮಿಸಿತು.

ರಾಹುಲ್ ದ್ರಾವಿಡ್‌ರಿಂದ ಮುಖ್ಯ ಕೋಚ್ ಹುದ್ದೆವಹಿಸಿಕೊಂಡಿರುವ ಗೌತಮ್ ಗಂಭೀರ್ ಅವರ ಹದ್ದಿನ ಕಣ್ಣಿನಡಿ ಭಾರತೀಯ ಕ್ರಿಕೆಟಿಗರು ಮಂಗಳವಾರ ಶ್ರೀಲಂಕಾ ಸರಣಿಗೆ ತನ್ನ ಮೊದಲ ಪ್ರಾಕ್ಟೀಸ್ ಸೆಶನ್‌ನಲ್ಲಿ ಭಾಗವಹಿಸಿದರು.

ಭಾರತೀಯ ಕ್ರಿಕೆಟಿಗರು ಕ್ರೀಡಾಂಗಣಕ್ಕೆ ತಲುಪಿರುವ ಹಾಗೂ ಪ್ರಾಕ್ಟೀಸ್ ಸೆಶನ್‌ಗಾಗಿ ಮೈದಾನಕ್ಕೆ ಪ್ರವೇಶಿಸಿರುವ ಕೆಲವು ಫೋಟೊಗಳನ್ನು ಸರಣಿಯ ಅಧಿಕೃತ ಪ್ರಸಾರಕ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದ್ದು, ಸರಣಿಯು ಜುಲೈ 27ರಂದು ಅರಂಭವಾಗಿ, ಆಗಸ್ಟ್ 7ರಂದು ಮುಕ್ತಾಯವಾಗಲಿದೆ.

ರಾಷ್ಟ್ರೀಯ ಆಯ್ಕೆಗಾರರು ಟಿ20 ಹಾಗೂ ಏಕದಿನ ಸರಣಿಗಾಗಿ ಶುಭಮನ್ ಗಿಲ್‌ಗೆ ಉಪ ನಾಯಕನ ಜವಾಬ್ದಾರಿವಹಿಸಿದ್ದಾರೆ. ಈ ಎರಡೂ ಮಾದರಿ ಕ್ರಿಕೆಟ್‌ನ ಉಪ ನಾಯಕನ ಸ್ಥಾನದಿಂದ ಹಾರ್ದಿಕ್ ಪಾಂಡ್ಯರನ್ನು ಕೈಬಿಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News