ಥಾಯ್ಲೆಂಡ್ ಓಪನ್: ಸಾತ್ವಿಕ್-ಚಿರಾಗ್ ಶುಭಾರಂಭ, ಪ್ರಣಯ್ ಗೆ ಸೋಲು
ಬ್ಯಾಂಕಾಕ್: ಭಾರತದ ಸ್ಟಾರ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆದರೆ ಐದನೇ ಶ್ರೇಯಾಂಕದ ಎಚ್.ಎಸ್. ಪ್ರಣಯ್ ಅವರ ಸವಾಲು ಅಂತ್ಯಗೊಂಡಿದ್ದು, ಅವರು ಪುರುಷರ ಸಿಂಗಲ್ಸ್ ನ ಆರಂಭಿಕ ಪಂದ್ಯದಲ್ಲಿ ಸಹ ಆಟಗಾರ ಮೀರಾಬಾ ಲುವಾಂಗ್ ಮೈಸ್ನಮ್ ವಿರುದ್ಧ ಸೋತಿದ್ದಾರೆ.
ಅಗ್ರ ಶ್ರೇಯಾಂಕದ ಸಾತ್ವಿಕ್ ಹಾಗೂ ಚಿರಾಗ್ ಬುಧವಾರ ಕೇವಲ 34 ನಿಮಿಷಗಳಲ್ಲಿ ಅಂತ್ಯಗೊಂಡ ಆರಂಭಿಕ ಸುತ್ತಿನ ಪಂದ್ಯದಲ್ಲಿ ಮಲೇಶ್ಯದ ಜೋಡಿ ನೂರ್ ಮುಹಮ್ಮದ್ ಅಯ್ಯೂಬ್ ಹಾಗೂ ಟಾನ್ ವೀ ಕಿಯೊಂಗ್ರನ್ನು 21-13, 21-13 ನೇರ ಗೇಮ್ ಗಳ ಅಂತರದಿಂದ ಮಣಿಸಿದರು.
ಭಾರತದ ಜೋಡಿ ಸಾತ್ವಿಕ್ ಹಾಗೂ ಚಿರಾಗ್ ಮುಂದಿನ ಸುತ್ತಿನಲ್ಲಿ ಚೀನಾದ ಜೋಡಿ ಕ್ಸಿ ಹಾವೊ ನಾನ್ ಹಾಗೂ ಝೆಂಗ್ ವೀ ಹಾನ್ ಸವಾಲನ್ನು ಎದುರಿಸಲಿದೆ.
ಪ್ರಣಯ್ ಮೊದಲ ತಡೆಯನ್ನು ದಾಟುವಲ್ಲಿ ವಿಫಲವಾಗಿದ್ದು 55 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಮೀರಾಬಾ ವಿರುದ್ಧ 19-21, 18-21 ಗೇಮ್ ಗಳ ಅಂತರದಿಂದ ಸೋತಿದ್ದಾರೆ.
ಮೀರಾಬಾ ಮುಂದಿನ ಸುತ್ತಿನಲ್ಲಿ ಡೆನ್ಮಾರ್ಕ್ನ ಕ್ರಿಸ್ಟೋಫರ್ಸನ್ರನ್ನು ಎದುರಿಸಲಿದ್ದಾರೆ. ಕ್ರಿಸ್ಟೋಫರ್ಸನ್ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಕಿರಣ್ ಜಾರ್ಜ್ರನ್ನು 21-15, 13-21, 21-17 ಗೇಮ್ ಗಳ ಅಂತರದಿಂದ ಸೋಲಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಶ್ಮಿತಾ ಚಲಿಹಾ ಮೊದಲ ಗೇಮ್ ಸೋಲಿನಿಂದ ಹೊರಬಂದು ಇಂಡೋನೇಶ್ಯದ ಎಸ್ಟರ್ ನುರುಮಿ ವರ್ಡೊಯೊರನ್ನು 19-21, 21-15, 21-14 ಅಂತರದಿಂದ ಸೋಲಿಸಿದ್ದಾರೆ. ಈ ಮೂಲಕ ಎರಡನೇ ಸುತ್ತು ತಲುಪಿದ್ದಾರೆ.
ಅಶ್ಮಿತಾ ಎರಡನೇ ಸುತ್ತಿನಲ್ಲಿ ಚೀನಾದ ಅಗ್ರ ಶ್ರೇಯಾಂಕದ ಹಾನ್ ಯುಇ ಅವರಿಂದ ಕಠಿಣ ಸವಾಲು ಎದುರಿಸಲಿದ್ದಾರೆ. ಹಾನ್ ಯುಇ ಭಾರತದ ಇನ್ನೋರ್ವ ಆಟಗಾರ್ತಿ ಮಾಳವಿಕಾ ಬಾನ್ಸೋಡ್ರನ್ನು 21-11, 21-10 ಗೇಮ್ ಗಳ ಅಂತರದಿಂದ ಮಣಿಸಿದ್ದಾರೆ.
ಉನ್ನತಿ ಹೂಡಾ ಕೂಡ ಮೊದಲ ಸುತ್ತಿನಲ್ಲಿ ಜಯ ಸಾಧಿಸುವಲ್ಲಿ ವಿಫಲರಾಗಿದ್ದು ಬೆಲ್ಜಿಯಮ್ನ ಲಿಯಾನ್ ಟಾನ್ ಎದುರು 21-14, 14-21, 9-21 ಅಂತರದಿಂದ ಸೋತಿದ್ದಾರೆ.