ಆಸ್ಟ್ರೇಲಿಯ ವಿರುದ್ಧ ಮೂರನೇ ಟೆಸ್ಟ್: ನಾಲ್ಕನೇ ದಿನದಾಟದಲ್ಲಿ ಮಳೆರಾಯ ಭಾರತ ತಂಡವನ್ನು ರಕ್ಷಿಸಲಿದೆಯೇ?

Update: 2024-12-16 16:25 GMT

PC : PTI 

ಬ್ರಿಸ್ಬೇನ್ : ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ಮಳೆರಾಯನ ಆಗಮನ ಸಾಧ್ಯತೆ ಅಧಿಕವಿದೆ. ಸದ್ಯ ಸೋಲಿನ ಭೀತಿಯಲ್ಲಿರುವ ಭಾರತ ತಂಡಕ್ಕೆ ಮಳೆರಾಯ ಆಸರೆಯಾಗುತ್ತಾನೆಯೇ? ಎಂದು ನೋಡಬೇಕಾಗಿದೆ. ಭಾರತೀಯ ಬ್ಯಾಟರ್‌ಗಳು ಹವಾಮಾನದ ಬಗ್ಗೆ ತಲೆಕೆಡಿಸಿಕೊಳ್ಳದೆ ತಂಡವನ್ನು ಸಂಕಷ್ಟದಿಂದ ಪಾರಾಗಿಸುವತ್ತ ಚಿತ್ತಹರಿಸಿದ್ದಾರೆ.

ಆಸ್ಟ್ರೇಲಿಯದ ಮೊದಲ ಇನಿಂಗ್ಸ್ 445 ರನ್‌ಗೆ ಉತ್ತರವಾಗಿ ಭಾರತ ತಂಡವು 51 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದೆ. ಟ್ರಾವಿಸ್ ಹೆಡ್(152 ರನ್)ಹಾಗೂ ಸ್ಟೀವನ್ ಸ್ಮಿತ್(101 ರನ್)241 ರನ್ ಜೊತೆಯಾಟ ನಡೆಸಿ ಆಸ್ಟ್ರೇಲಿಯವನ್ನು ಆರಂಭಿಕ ಕುಸಿತದಿಂದ ಪಾರಾಗಿಸಿದ್ದರು.

ಜಸ್‌ಪ್ರಿತ್ ಬುಮ್ರಾ ಉತ್ತಮ ಬೌಲಿಂಗ್ ನಡೆಸದೇ ಇರುತ್ತಿದ್ದರೆ ಪ್ರವಾಸಿಗರು ಮೂರನೇ ದಿನದಾಟದಂತ್ಯಕ್ಕೆ 394 ರನ್‌ಗಿಂತಲೂ ಹೆಚ್ಚು ಹಿನ್ನಡೆ ಅನುಭವಿಸುವ ಸಾಧ್ಯತೆಯಿತ್ತು.

ತನ್ನ ಒನ್‌ಮ್ಯಾನ್ ಶೋ ಮುಂದುವರಿಸಿದ ಬುಮ್ರಾ ಅವರು 76 ರನ್‌ಗೆ 6 ವಿಕೆಟ್‌ಗಳನ್ನು ಉರುಳಿಸಿದ್ದರು. ಆದರೆ ಭಾರತದ ಬ್ಯಾಟಿಂಗ್ ವಿಭಾಗ ಮತ್ತೊಮ್ಮೆ ಕೈಕೊಟ್ಟಿದೆ. ಕೆ.ಎಲ್.ರಾಹುಲ್ ಹೊರತುಪಡಿಸಿ ಉಳಿದವರು ಅಲ್ಪ ಮೊತ್ತಕ್ಕೆ ಔಟಾಗಿದ್ದಾರೆ.

ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ ಮಂಗಳವಾರ ಬೆಳಗ್ಗೆ ಹಾಗೂ ಮಧ್ಯಾಹ್ನ ಮಳೆ ಆಗಮಿಸುವ ಸಾಧ್ಯತೆ ಅಧಿಕವಿದೆ.

ಐದು ಪಂದ್ಯಗಳ ಟೆಸ್ಟ್ ಸರಣಿಯು ಸದ್ಯ 1-1ರಿಂದ ಸಮಬಲದಲ್ಲಿದೆ. ಭಾರತ ತಂಡವು ಪರ್ತ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ 295 ರನ್ ಅಂತರದಿಂದ ಜಯ ಸಾಧಿಸಿದ್ದರೆ, ಅಡಿಲೇಡ್‌ನಲ್ಲಿ ನಡೆದ ಪಿಂಕ್-ಬಾಲ್ ಟೆಸ್ಟ್‌ನಲ್ಲಿ 10 ವಿಕೆಟ್‌ಗಳಿಂದ ಗೆಲುವು ದಾಖಲಿಸಿರುವ ಆಸ್ಟ್ರೇಲಿಯ ಸರಣಿ ಸಮಬಲಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News