ನಾಳೆ 2ನೇ ಏಕದಿನ | ಶ್ರೀಲಂಕಾ ಸ್ಪಿನ್ನರ್‌ಗಳನ್ನು ದಿಟ್ಟವಾಗಿ ಎದುರಿಸಲು ಭಾರತ ಸಿದ್ಧತೆ

Update: 2024-08-03 16:14 GMT

PC : PTI 

ಕೊಲಂಬೊ: ನಿಧಾನಗತಿಯ ಪಿಚ್ ಹಾಗೂ ಶ್ರೀಲಂಕಾದ ಸ್ಪಿನ್ ಬೌಲರ್‌ಗಳನ್ನು ಎದುರಿಸುವ ಕುರಿತು ರಣತಂತ್ರ ರೂಪಿಸುವುದು ರವಿವಾರ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಆದ್ಯತೆಗಳ ಪಟ್ಟಿಯಲ್ಲಿ ಪ್ರಮುಖವಾಗಿವೆ.

ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಗೆಲ್ಲಲು 231 ರನ್ ಗೌರವಾರ್ಹ ಮೊತ್ತ ಬೆನ್ನಟ್ಟಿದ ಭಾರತವು ಒಂದು ಹಂತದಲ್ಲಿ 130 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ, ಲಂಕಾ ಸ್ಪಿನ್ನರ್‌ಗಳು ಭಾರತ ತಂಡವನ್ನು 230 ರನ್‌ಗೆ ನಿಯಂತ್ರಿಸಿ ಪಂದ್ಯ ಟೈನಲ್ಲಿ ಅಂತ್ಯವಾಗಲು ಕಾರಣರಾದರು.

ಆರಂಭದಲ್ಲಿ ರೋಹಿತ್ ಶರ್ಮಾರ ಪ್ರತಿರೋಧ ಎದುರಿಸಿದ್ದ ಲಂಕಾವು ಭಾರತದ ಹಿಟ್ಟರ್‌ಗಳನ್ನು ಕಟ್ಟಿಹಾಕಲು ಯಶಸ್ವಿಯಾಯಿತು. ಆತಿಥೇಯ ತಂಡವು ಭಾರತದ ಅಗ್ರ ಹಾಗೂ ಮಧ್ಯಮ ಸರದಿಯ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ವಿರುದ್ಧ ತನ್ನ ಸ್ಪಿನ್ ಅಸ್ತ್ರವನ್ನು ಗುರಿಯಾಗಿಸಿಕೊಂಡು ಅಚ್ಚರಿಯ ಫಲಿತಾಂಶ ಪಡೆದಿದೆ.

ಎಡಗೈ ಸ್ಪಿನ್ನರ್ ದುನಿತ್ ವೆಲ್ಲಲಾಗೆ ಹಾಗೂ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಅವರು ಕೊಹ್ಲಿ ಅವರ ರನ್ ವೇಗಕ್ಕೆ ಕಡಿವಾಣ ಹಾಕಿದರು. ಕೊಹ್ಲಿಗೆ ಏಕದಿನ ಕ್ರಿಕೆಟ್‌ನಲ್ಲಿ 14 ಸಾವಿರ ರನ್ ಗಳಿಸಿದ 3ನೇ ಬ್ಯಾಟರ್ ಎನಿಸಿಕೊಳ್ಳಲು ಇನ್ನು 128 ರನ್ ಅಗತ್ಯವಿದೆ. ಸಚಿನ್ ತೆಂಡುಲ್ಕರ್ ಹಾಗೂ ಕುಮಾರರ ಸಂಗಕ್ಕರ ಈ ಸಾಧನೆ ಮಾಡಿದ್ದಾರೆ.

ಕೊಲಂಬೊ ಪಿಚ್‌ನಲ್ಲಿ ಸ್ಪಿನ್ನರ್‌ಗಳನ್ನು ದಿಟ್ಟವಾಗಿ ಎದುರಿಸಬೇಕಾದರೆ ಭಾರತೀಯ ಬ್ಯಾಟರ್‌ಗಳು ದೀರ್ಘ ಸಮಯ ಬ್ಯಾಟ್ ಮಾಡಬೇಕಾಗುತ್ತದೆ.

ಒಂದೆಡೆ ಕೊಲಂಬೊ ಪಿಚ್‌ನಲ್ಲಿ ವಿಕೆಟ್‌ಗಳು ಬೀಳುತ್ತಿದ್ದರೂ ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಹಾಗೂ ವಾಶಿಂಗ್ಟನ್ ಸುಂದರ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಶ್ರೀಲಂಕಾದ ಪಥುಮ್ ನಿಸ್ಸಾಂಕ ಹಾಗೂ ವೆಲ್ಲಲಾಗೆ ಅರ್ಧಶತಕ ಸಿಡಿಸಿದ್ದಾರೆ.

ಸತತ 3 ಟ್ವೆಂಟಿ-20 ಪಂದ್ಯಗಳಲ್ಲಿ ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿದ್ದ ಶ್ರೀಲಂಕಾ ಮೊದಲ ಏಕದಿನ ಪಂದ್ಯದಲ್ಲಿ 101 ರನ್‌ಗೆ 5 ವಿಕೆಟ್ ಕಳೆದುಕೊಂಡ ನಂತರ ತಿರುಗೇಟು ನೀಡಿತ್ತು. ಮುಂದಿನ ಎರಡು ಏಕದಿನ ಪಂದ್ಯಗಳಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ.

ಶುಭಮನ್ ಗಿಲ್ ಸಹಿತ ಭಾರತದ ನಾಲ್ವರು ಸ್ಪಿನ್ನರ್‌ಗಳು 30 ಓವರ್‌ಗಳಲ್ಲಿ 4 ವಿಕೆಟ್ ಪಡೆದು 126 ರನ್ ಬಿಟ್ಟುಕೊಟ್ಟಿದ್ದಾರೆ.

ರಿಷಭ್ ಪಂತ್ ಅಥವಾ ರಿಯಾನ್ ಪರಾಗ್‌ರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳುವ ಆಯ್ಕೆಯನ್ನು ಭಾರತ ಹೊಂದಿದೆ. ಈ ಇಬ್ಬರು ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಬಲ್ಲರು. ಎಲ್ಲ 3 ಟಿ-20 ಹಾಗೂ ಮೊದಲ ಏಕದಿನ ಪಂದ್ಯವನ್ನು ಆಡಿದ್ದ ಮುಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಿ ಖಲೀಲ್ ಅಹ್ಮದ್ ಅಥವಾ ಹರ್ಷಿತ್ ರಾಣಾಗೆ ಅವಕಾಶ ನೀಡುವ ಸಾಧ್ಯತೆಯಿದೆ.

ಮೊದಲ ಏಕದಿನದಲ್ಲಿ ಪತನಗೊಂಡಿರುವ 18 ವಿಕೆಟ್‌ಗಳ ಪೈಕಿ 13 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾಗಿದ್ದವು.

ಭಾರತ ತಂಡವನ್ನು 230ಕ್ಕೆ ನಿಯಂತ್ರಿಸಿ ಗಮನ ಸೆಳೆದಿರುವ ಶ್ರೀಲಂಕಾ ತಂಡವು 3 ಪಂದ್ಯಗಳ ಸರಣಿಯ ಎರಡನೇ ಪಂದ್ಯವನ್ನು ಜಯಿಸಿ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ. ಮೊದಲ ಏಕದಿನ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಸ್ಪಿನ್ನರ್ ಹಸರಂಗ ಫಿಟ್ನೆಸ್ ಶ್ರೀಲಂಕಾಕ್ಕೆ ತಲೆನೋವಾಗಿದೆ.

ಪಂದ್ಯದ ಸಮಯ: ಮಧ್ಯಾಹ್ನ 2:30

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News