ಕ್ರಿಕೆಟ್ ಅಭಿಮಾನಿಗೆ ಸೆಲ್ಫಿ ನಿರಾಕರಿಸಿದ ಟ್ರಾವಿಸ್ ಹೆಡ್: ವೀಡಿಯೊ ವೈರಲ್

ಟ್ರಾವಿಸ್ ಹೆಡ್ | PC : instagram.com
ಹೊಸದಿಲ್ಲಿ: ಅಸ್ಟ್ರೇಲಿಯದ ಕ್ರಿಕೆಟಿಗ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಟಗಾರ ಟ್ರಾವಿಸ್ ಹೆಡ್ ಕ್ರಿಕೆಟ್ ಅಭಿಮಾನಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ನಿರಾಕರಿಸಿರುವ ವೀಡಿಯೊವೊಂದು ವೈರಲ್ ಆಗಿದೆ. ಇದು ಸೆಲೆಬ್ರಿಟಿಗಳ ವೈಯಕ್ತಿಕ ವಿಚಾರ ಹಾಗೂ ಖಾಸಗಿತನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸದ್ಯ ಐಪಿಎಲ್‌ನಲ್ಲಿ ಆಡುತ್ತಿರುವ ಹೆಡ್ ಅವರು ಹೈದರಾಬಾದ್‌ನ ಸೂಪರ್ ಮಾರ್ಕೆಟ್‌ನಲ್ಲಿ ದಿನಸಿ ವಸ್ತುಗಳನ್ನು ಖರೀದಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಈ ವೇಳೆ ಅಭಿಮಾನಿಗಳ ಗುಂಪೊಂದು ಅವರನ್ನು ಹಿಂಬಾಲಿಸಿಕೊಂಡು ಹೋಗಿ ವೀಡಿಯೊ ಸೆರೆ ಹಿಡಿಯುತ್ತಾ , ಪದೇ ಪದೇ ಸೆಲ್ಫಿ ಕೇಳುತ್ತಿರುವುದು ಕಂಡುಬಂದಿದೆ. ಅದಕ್ಕೆ ಹೆಡ್ ‘ಇಲ್ಲ ’ಎಂದು ಹೇಳುತ್ತಾ ಸಭ್ಯತೆಯಿಂದ ಸೆಲ್ಫಿಗೆ ನಿರಾಕರಿಸಿದರೂ ಅಭಿಮಾನಿಗಳು ಸೆಲ್ಫಿಗಾಗಿ ಪಟ್ಟುಹಿಡಿದರು.
‘ಹೆಡ್ ತುಂಬಾ ಅಹಮಿಕೆ ಪ್ರದರ್ಶಿಸುತ್ತಿದ್ದಾರೆ’ಎಂದು ಅಭಿಮಾನಿಯೊಬ್ಬ ಹೇಳುತ್ತಿರುವ ವೀಡಿಯೊವೊಂದು ಎಕ್ಸ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಘಟನೆಯ ನಿಖರವಾದ ದಿನಾಂಕ ಹಾಗೂ ಸ್ಥಳ ಗೊತ್ತಾಗಿಲ್ಲ.
ಈ ವೀಡಿಯೊಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಕ್ರಿಕೆಟ್ ಅಭಿಮಾನಿಯ ವರ್ತನೆಯನ್ನು ಟೀಕಿಸಿದರೆ, ಇನ್ನು ಕೆಲವರು ಹೆಡ್ ಅವರ ಪ್ರತಿಕ್ರಿಯೆಯನ್ನು ಪ್ರಶ್ನಿಸಿದ್ದಾರೆ. ಓರ್ವ ಟ್ವೀಟ್ ಬಳಕೆದಾರ ಹೆಡ್ ನಿರ್ಧಾರ ಸರಿ ಇದೆ ಎಂದಿದ್ದಾರೆ.