ಅಂಡರ್-19 ವಿಶ್ವಕಪ್ ಟೂರ್ನಿ: ಸತತ 5ನೇ ಬಾರಿ ಭಾರತ ಫೈನಲ್‌ಗೆ ಲಗ್ಗೆ

Update: 2024-02-06 16:04 GMT

Photo: @ICC

ಬೆನೊನಿ : ನಾಯಕ ಉದಯ್ ಸಹರಾನ್(81 ರನ್, 124 ಎಸೆತ) ಹಾಗೂ ಸಚಿನ್ ಧಾಸ್(96 ರನ್, 95 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ಹಾಲಿ ಚಾಂಪಿಯನ್ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 2 ವಿಕೆಟ್‌ಗಳ ಅಂತರದಿಂದ ಮಣಿಸಿ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಸತತ ಐದನೇ ಬಾರಿ ಫೈನಲ್‌ಗೆ ಪ್ರವೇಶಿಸಿದೆ.

ಮಂಗಳವಾರ ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ಗೆಲ್ಲಲು 245 ರನ್ ಗುರಿ ಬೆನ್ನಟ್ಟಿದ ಭಾರತ 48.5 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 248 ರನ್ ಗಳಿಸಿತು. ಭಾರತ 12ನೇ ಓವರ್‌ನಲ್ಲಿ 32 ರನ್‌ಗೆ 4 ವಿಕೆಟ್ ಕಳೆದುಕೊಂಡು ಆರಂಭಿಕ ಕುಸಿತ ಕಂಡಿತ್ತು. ಆಗ ಜೊತೆಯಾದ ಉದಯ್ ಹಾಗೂ ಸಚಿನ್ 6ನೇ ವಿಕೆಟ್‌ಗೆ 171 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಸಚಿನ್(96 ರನ್, 96 ಎಸೆತ, 11 ಬೌಂಡರಿ, 1 ಸಿಕ್ಸರ್)ಕೇವಲ 4 ರನ್‌ನಿಂದ ಶತಕ ವಂಚಿತರಾದರು.

ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಉದಯ್ 81 ರನ್(124 ಎಸೆತ, 6 ಬೌಂಡರಿ) ಹಾಗೂ ರಾಜ್ ಲಂಬಾನಿ ಔಟಾಗದೆ 13 ರನ್ ಗಳಿಸಿ ರೋಚಕ ಗೆಲುವು ತಂದುಕೊಟ್ಟರು. ದಕ್ಷಿಣ ಆಫ್ರಿಕಾದ ಪರ ಟ್ರಿಸ್ಟಾನ್ ಲುಸ್(3-37) ಹಾಗೂ ಕ್ವಾನಾ ಎಂಫಾಕಾ(3-32) ತಲಾ 3 ವಿಕೆಟ್ ಪಡೆದರು.

ದಕ್ಷಿಣ ಆಫ್ರಿಕಾ 244/7: ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಬ್ಯಾಟರ್ ಪ್ರಿಟೋರಿಯಸ್(76 ರನ್, 102 ಎಸೆತ) ಹಾಗೂ ರಿಚರ್ಡ್ ಸೆಲೆಟ್‌ಸ್ವೇನ್(64 ರನ್, 100 ಎಸೆತ)ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತು.

ಭಾರತದ ವೇಗಿಗಳಾದ ರಾಜ್ ಲಿಂಬಾನಿ(3-60) ಹಾಗೂ ನಮನ್ ತಿವಾರಿ(1-52), ಎಡಗೈ ಸ್ಪಿನ್ನರ್‌ಗಳಾದ ಮುಶೀರ್ ಖಾನ್(2-42) ಹಾಗೂ ಸೌಮಿ ಪಾಂಡೆ(1-38) ದಕ್ಷಿಣ ಆಫ್ರಿಕಾವನ್ನು 250ರೊಳಗೆ ನಿಯಂತ್ರಿಸಿದರು.

ದ.ಆಫ್ರಿಕಾ 46 ರನ್‌ಗೆ 2 ವಿಕೆಟ್ ಕಳೆದುಕೊಂಡಿತು. ಆಗ 3ನೇ ವಿಕೆಟ್‌ಗೆ 72 ರನ್ ಸೇರಿಸಿದ ಪ್ರಿಟೋರಿಯಸ್ ಹಾಗೂ ರಿಚರ್ಡ್ ತಂಡವನ್ನು ಆಧರಿಸಿದರು. ಪ್ರಿಟೋರಿಯಸ್ ಸರಣಿಯಲ್ಲಿ ಸತತ 3ನೇ ಅರ್ಧಶತಕ ಗಳಿಸಿದರು. ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದ ಪ್ರಿಟೋರಿಯಸ್‌ಗೆ ಮುಶೀರ್ ಖಾನ್ ಪೆವಿಲಿಯನ್ ಹಾದಿ ತೋರಿಸಿದರು.

ಜೇಮ್ಸ್ (24 ರನ್) ಹಾಗೂ ಟ್ರಿಸ್ಟಾನ್(23) ದಕ್ಷಿಣ ಆಫ್ರಿಕಾ ಕೊನೆಯ 10 ಓವರ್‌ಗಳಲ್ಲಿ 81 ರನ್ ಗಳಿಸಲು ನೆರವಾದರು̤


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News