ಔಟ್ ಆಗದಿದ್ದರೂ ಮೈದಾನದಿಂದ ಹೊರ ನಡೆದ ಇಶಾನ್ ಕಿಶನ್ ಪ್ರಾಮಾಣಿಕತೆ ಪ್ರಶ್ನಿಸಿದ ವೀರೇಂದ್ರ ಸೆಹ್ವಾಗ್

Update: 2025-04-24 21:50 IST
ಔಟ್ ಆಗದಿದ್ದರೂ ಮೈದಾನದಿಂದ ಹೊರ ನಡೆದ ಇಶಾನ್ ಕಿಶನ್ ಪ್ರಾಮಾಣಿಕತೆ ಪ್ರಶ್ನಿಸಿದ ವೀರೇಂದ್ರ ಸೆಹ್ವಾಗ್

ವೀರೇಂದ್ರ ಸೆಹ್ವಾಗ್ , ಇಶಾನ್ ಕಿಶನ್‌ | PC : PTI 

  • whatsapp icon

ಹೊಸದಿಲ್ಲಿ: ಸನ್‌ ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಬುಧವಾರ ನಡೆದ ಐಪಿಎಲ್ ಪಂದ್ಯದ ವೇಳೆ ಔಟ್ ಆಗದಿದ್ದರೂ ಮೈದಾನದಿಂದ ಹೊರ ನಡೆದಿರುವುದಕ್ಕಾಗಿ ಇಶಾನ್ ಕಿಶನ್‌ ರನ್ನು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟೀಕಿಸಿದ್ದು ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ್ದಾರೆ.   

ದೀಪಕ್ ಚಹಾರ್ ಎಸೆದ 3ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ದೀಪಕ್ ಚಹಾರ್ ಎಸೆತವನ್ನು ಲೆಗ್‌ಸೈಡ್‌ನತ್ತ ಬಾರಿಸಲು ಕಿಶನ್ ಮುಂದಾದರು. ಆದರೆ ಅದು ಸಾಧ್ಯವಾಗಲಿಲ್ಲ. ಆಗ ಅಂಪೈರ್ ನಿರ್ಧಾರಕ್ಕೆ ಕಾಯದೆ, ಎದುರಾಳಿ ತಂಡದ ಆಟಗಾರರು ಔಟ್ ಮನವಿ ಮಾಡದೇ ಇದ್ದರೂ ಕಿಶನ್ ಮೈದಾನ ತೊರೆದಿದ್ದರು.

ಹೈದರಾಬಾದ್ ತಂಡವು 8 ಪಂದ್ಯಗಳಲ್ಲಿ 6ನೇ ಸೋಲನುಭವಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಹೈದರಾಬಾದ್ ಇನಿಂಗ್ಸ್‌ನ ವೇಳೆ 3ನೇ ಓವರ್‌ನ ಮೊದಲ ಎಸೆತದಲ್ಲಿ ಈ ವಿವಾದಾತ್ಮಕ ಘಟನೆ ನಡೆದಿದೆ. ಕಿಶನ್ ಅವರು ಚಹಾರ್ ಅವರ ಲೆಗ್ ಸೈಡ್ ಎಸೆತ ಆಡಲು ಯತ್ನಿಸಿದ್ದರು. ಕಿಶನ್ ಅವರ ಬ್ಯಾಟ್ ಅಥವಾ ದೇಹಕ್ಕೆ ಚೆಂಡು ಸ್ಪರ್ಶಿಸದೆ ಇರುವುದು ವೀಡಿಯೊ ರಿಪ್ಲೇಯಲ್ಲಿ ಸ್ಪಷ್ಟವಾಗಿತ್ತು.

‘‘ಹಲವು ಬಾರಿ ಆ ಕ್ಷಣದಲ್ಲಿ ಮನಸ್ಸು ಕೆಲಸ ಮಾಡಲು ವಿಫಲವಾಗುತ್ತದೆ. ಆಗ ಕನಿಷ್ಠ ಪಕ್ಷ ನಿಂತು, ಅಂಪೈರ್ ತನ್ನ ನಿರ್ಧಾರ ತೆಗೆದುಕೊಳ್ಳುವ ತನಕ ಕಾಯಬೇಕು. ಅವರು ತಮ್ಮ ಕೆಲಸಕ್ಕಾಗಿ ಹಣ ತೆಗೆದುಕೊಳ್ಳುತ್ತಾರೆ. ಕಿಶನ್ ಅವರ ಈ ಪ್ರಾಮಾಣಿಕತೆ ನನಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅದೊಂದು ಎಡ್ಜ್ ಆಗಿದ್ದರೆ ಅವರ ಕ್ರೀಡೆಯ ಸ್ಫೂರ್ತಿ ಎಂದು ನನಗೆ ಅರ್ಥವಾಗುತ್ತಿತ್ತು. ಆದರೆ, ಅವರು ಆಗ ಔಟ್ ಆಗಿರಲಿಲ್ಲ. ಇದ್ದಕ್ಕಿದ್ದಂತೆ ಕ್ರೀಸ್ ತೊರೆದ ಕಾರಣ ಅಂಪೈರ್ ಗೊಂದಲಕ್ಕೆ ಸಿಲುಕಿದರು’’ ಎಂದು ಸೆಹ್ವಾಗ್ ಹೇಳಿದರು.

ಇಶಾನ್ ಕಿಶನ್ ಟೂರ್ನಿಯ ಮೊದಲ ಪಂದ್ಯದಲ್ಲಿ ಶತಕ ಗಳಿಸಿದ ನಂತರ ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ.

ಕಿಶನ್ ಕೇವಲ 1 ರನ್‌ ಗೆ ಔಟಾಗಿದ್ದು, ಮುಂಬೈ ಬೌಲರ್‌ ಗಳ ಎದುರು ಪರದಾಡಿದ ಹೈದರಾಬಾದ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News