ನಾಯಕನ ಜೊತೆಗೆ ಜಗಳವಾಡಿ ಮೈದಾನದಿಂದ ಹೊರ ನಡೆದ ವೆಸ್ಟ್ ಇಂಡೀಸ್ ಬೌಲರ್ ಅಲ್ಝರಿ ಜೋಸೆಫ್ ಅಮಾನತು

Update: 2024-11-08 05:50 GMT

ಅಲ್ಝರಿ ಜೋಸೆಫ್ (Photo: PTI)

ಬ್ರಿಜ್ ಟೌನ್ (ಬಾರ್ಬಡೋಸ್): ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ವೇಳೆ ಫೀಲ್ಡಿಂಗ್ ನಿಯೋಜನೆ ವಿಚಾರದಲ್ಲಿ ತನ್ನದೇ ನಾಯಕ ಶಾಯಿ ಹೋಪ್ ರೊಂದಿಗೆ ಮೈದಾನದಲ್ಲಿ ವಾಗ್ವಾದ ನಡೆಸಿ, ತಮ್ಮ ಓವರ್ ಮುಗಿಯುತ್ತಿದ್ದಂತೆ ಮೈದಾನದಿಂದ ಹೊರನಡೆದ ವೆಸ್ಟ್ ಇಂಡೀಸ್ ವೇಗದ ಬೌಲರ್ ಅಲ್ಝರಿ ಜೋಸೆಫ್ ಅವರನ್ನು ಎರಡು ಪಂದ್ಯಗಳಿಗೆ ಅಮಾನತುಗೊಳಿಸಲಾಗಿದೆ.

ಬುಧವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ ತಂಡದ ವಿರುದ್ಧದ ಪಂದ್ಯವನ್ನು ಜಯಿಸುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಕೈವಶ ಮಾಡಿಕೊಂಡಿತು. ಇದೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಬೌಲಿಂಗ್ ಮಾಡುತ್ತಿದ್ದ ವೇಳೆ, ತಮ್ಮದೊಂದು ಓವರ್ ನಲ್ಲಿ ನಾಯಕ ಶಾಯಿ ಹೋಪ್ ನಿಯೋಜಿಸಿದ ಫೀಲ್ಡಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಲ್ಝರಿ ಜೋಸೆಫ್, ತಮ್ಮ ಓವರ್ ಮುಕ್ತಾಯಗೊಂಡ ನಂತರ ಮೈದಾನದಿಂದಲೇ ಹೊರ ನಡೆದರು. ಇದರಿಂದ ವೆಸ್ಟ್ ಇಂಡೀಸ್ ತಂಡ ತೀವ್ರ ಮುಜುಗರಕ್ಕೀಡಾಯಿತು.

ಜೋಸೆಫ್ ಬೌಲ್ ಮಾಡಿದ ನಾಲ್ಕನೆಯ ಓವರ್ ಗೂ ಮುನ್ನ, ನಾಯಕ ಶಾಯಿ ಹೋಪ್ ಹಾಗೂ ಅವರೊಂದಿಗೆ ಸುದೀರ್ಘ ವಾಗ್ವಾದ ನಡೆಯಿತು. ಇದರಿಂದ ಅಂಪೈರ್ ಗಳು ಆಟವನ್ನು ಮುಂದುವರಿಸುವಂತೆ ಅವರಿಗೆ ಸಲಹೆ ನೀಡಬೇಕಾದ ಸ್ಥಿತಿ ಸೃಷ್ಟಿಯಾಯಿತು. ಜೋಸೆಫ್ ಓವರ್ ನ ಒಂದು ಬಾಲ್ ಅನ್ನು ಇಂಗ್ಲೆಂಡ್ ಬ್ಯಾಟರ್ ಆಫ್ ಸೈಡ್ ಗೆ ಅಟ್ಟಿದಾಗ, ನಾಯಕ ಹೋಪ್ ವಿರುದ್ಧ ಜೋಸೆಫ್ ಆಕ್ರೋಶದ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ತಮ್ಮ ಓವರ್ ಮುಕ್ತಾಯಗೊಂಡ ನಂತರ ಮೈದಾನವನ್ನು ತೊರೆದ ಅವರು, ಸ್ವಲ್ಪ ಕಾಲದ ನಂತರ ಮತ್ತೆ ಮೈದಾನಕ್ಕೆ ಮರಳಿದರು.

ಈ ಸಂಬಂಧ ಗುರುವಾರ ಹೇಳಿಕೆ ಬಿಡುಗಡೆ ಮಾಡಿರುವ ಕ್ರಿಕೆಟ್ ವೆಸ್ಟ್ ಇಂಡೀಸ್, ಅಲ್ಝರಿ ಜೋಸೆಫ್ ವರ್ತನೆಯು ಕ್ರಿಕೆಟ್ ವೆಸ್ಟ್ ಇಂಡೀಸ್ ನ ಪ್ರಮಾಣೀಕೃತ ವೃತ್ತಿಪರತೆಯನ್ನು ಉಲ್ಲಂಘಿಸಿದೆ ಎಂದು ಹೇಳಿದೆ.

“ಅಲ್ಝರಿಯ ವರ್ತನೆಯು ಕ್ರಿಕೆಟ್ ವೆಸ್ಟ್ ಇಂಡೀಸ್ ನ ಪ್ರಧಾನ ಮೌಲ್ಯಗಳಿಗೆ ತಕ್ಕುದಾಗಿರಲಿಲ್ಲ. ಇಂತಹ ವರ್ತನೆಯನ್ನು ಉಪೇಕ್ಷಿಸಲು ಸಾಧ್ಯವಿಲ್ಲ. ಪರಿಸ್ಥಿತಿಯ ತೀವ್ರತೆಯನ್ನು ಸಂಪೂರ್ಣವಾಗಿ ಅನುಮೋದಿಸಲು ನಾವು ನಿರ್ಣಾಯಕ ಕ್ರಮ ಕೈಗೊಂಡಿದ್ದೇವೆ” ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಮ್ಮ ವರ್ತನೆಯ ಕುರಿತು ಅಲ್ಝರಿ ಜೋಸೆಫ್ ಕೂಡಾ ಕ್ಷಮೆಯಾಚಿಸಿದ್ದಾರೆ.

ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮುಕ್ತಾಯಗೊಂಡಿದ್ದು, ಶನಿವಾರದಿಂದ ಬ್ರಿಜ್ ಟೌನ್ ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಐದು ಪಂದ್ಯಗಳ ಟಿ-20 ಸರಣಿ ಪ್ರಾರಂಭಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News