ತವರಿನ ಸೋಲಿಗೆ ವಿದಾಯ ಹೇಳುವುದೇ ಆರ್ ಸಿ ಬಿ?

ಸಾಂದರ್ಭಿಕ ಚಿತ್ರ | PC : NDTV
ಬೆಂಗಳೂರು: ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ತವರು ಮೈದಾನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದೂ ಪಂದ್ಯವನ್ನು ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುರುವಾರ ನಡೆಯಲಿರುವ 41ನೇ ಐಪಿಎಲ್ ಪಂದ್ಯದಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.
8 ಪಂದ್ಯಗಳಲ್ಲಿ 5ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆರ್ಸಿಬಿ ತಂಡ ಪ್ಲೇ ಆಫ್ ಗೆ ತೇರ್ಗಡೆಯಾಗುವ ರೇಸ್ ನಲ್ಲಿದೆ. ಪಂಜಾಬ್ ವಿರುದ್ಧ ಎ.20ರಂದು ನಡೆದಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ದೇವದತ್ತ ಪಡಿಕ್ಕಲ್ರ ಅರ್ಧಶತಕದ ನೆರವಿನಿಂದ 7 ವಿಕೆಟ್ಗಳಿಂದ ಜಯ ಸಾಧಿಸಿತ್ತು.
ರಾಜಸ್ಥಾನ ತಂಡವು ಈ ವರ್ಷ ಕಳಪೆ ಪ್ರದರ್ಶನ ನೀಡುತ್ತಿದ್ದು, ಸತತ 4 ಪಂದ್ಯಗಳಲ್ಲಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಗೆ ಲಗ್ಗೆ ಇಡಲು ಇನ್ನುಳಿದ ಎಲ್ಲ 6 ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೊ ಸೂಪರ್ ಜಯಂಟ್ಸ್ ವಿರುದ್ದದ ಪಂದ್ಯಗಳಲ್ಲಿ ಕೊನೆಯ ಓವರ್ನಲ್ಲಿ 9 ರನ್ ಗಳಿಸಲು ಸಾಧ್ಯವಾಗದೇ ಸೋಲುಂಡಿದೆ. ಖಾಯಂ ನಾಯಕ ಸಂಜು ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ಆಡುತ್ತಿರುವ ರಾಜಸ್ಥಾನಕ್ಕೆ ರಿಯಾನ್ ಪರಾಗ್ ಹಂಗಾಮಿ ನಾಯಕನಾಗಿದ್ದಾರೆ. ಕಳೆದ ವರ್ಷ ಬ್ಯಾಟಿಂಗ್ ನಲ್ಲಿ ಮಿಂಚಿದ್ದ ಪರಾಗ್ ಈ ಬಾರಿ ವೈಫಲ್ಯ ಕಂಡಿದ್ದಾರೆ.
ಸದ್ಯ ಆರ್ಸಿಬಿ ತಂಡವು ತವರು ಮೈದಾನದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದು, ಆಡಿರುವ ಎಲ್ಲ 3 ಪಂದ್ಯಗಳಲ್ಲಿ ಸೋಲುಂಡಿದೆ. ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ತನ್ನ ತಪ್ಪನ್ನು ತಿದ್ದಿಕೊಳ್ಳುವ ವಿಶ್ವಾಸದಲ್ಲಿದೆ.ಆರ್ಸಿಬಿ ಈ ವರ್ಷ 5 ಪಂದ್ಯಗಳನ್ನು ತವರಿನ ಹೊರಗೆ ಗೆದ್ದಿದೆ. ಬೆಂಗಳೂರಿನಲ್ಲಿ ಸತತ 3 ಪಂದ್ಯಗಳನ್ನು ಸೋತಿದೆ.
ಆರ್ಸಿಬಿ ತಂಡದ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಎರಡು ಬಾರಿ ಮೊದಲ ಓವರ್ ನಲ್ಲೇ ವಿಕೆಟ್ ಒಪ್ಪಿಸಿದ್ದು, ಎರಡು ಬಾರಿಯೂ ಅರ್ಷದೀಪ್ ಸಿಂಗ್ ಗೆ ವಿಕೆಟ್ ಒಪ್ಪಿಸಿದ್ದರು. ಭುಜನೋವಿನಿಂದ ಚೇತರಿಸಿಕೊಂಡು ವಾಪಸಾಗಿರುವ ರಾಜಸ್ಥಾನದ ರಿಯಾನ್ ಪರಾಗ್ ಲಕ್ನೊ ವಿರುದ್ದ ಹಿಂದಿನ ಪಂದ್ಯದಲ್ಲಿ 39 ರನ್ ಗಳಿಸಿದ್ದರು. ಆದರೆ ತಂಡದ ಗೆಲುವಿಗೆ 12 ರನ್ ಅಗತ್ಯವಿದ್ದಾಗ ಔಟಾಗಿದ್ದರು. ರಾಜಸ್ಥಾನ ಇನ್ನು 6 ಪಂದ್ಯಗಳನ್ನು ಆಡಲು ಬಾಕಿ ಇದ್ದು, ಪ್ಲೇ ಆಫ್ ವಿಶ್ವಾಸ ತೂಗುಯ್ಯಾಲೆಯಲ್ಲಿದೆ.
ಆರ್ಸಿಬಿ ತಂಡ ಕೊನೆಯ ಕ್ಷಣದಲ್ಲಿ ಗಾಯದ ಸಮಸ್ಯೆಯನ್ನು ಹೊರತುಪಡಿಸಿ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ.
ರಾಜಸ್ಥಾನದ ಹಿರಿಯ ಬೌಲರ್ ಸಂದೀಪ್ ಶರ್ಮಾ ಕಳೆದೆರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಡೆಲ್ಲಿ ವಿರುದ್ಧ್ದ ಕೊನೆಯ ಓವರ್ನಲ್ಲಿ 19 ರನ್ ನೀಡಿದ್ದರು. ಆ ನಂತರ ಲಕ್ನೊ ವಿರುದ್ಧ ಪಂದ್ಯದಲ್ಲಿ 4 ಓವರ್ ಗಳಲ್ಲಿ 55 ರನ್ ಬಿಟ್ಟುಕೊಟ್ಟಿದ್ದರು.
► ಪಿಚ್ ಹಾಗೂ ವಾತಾವರಣ
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್ ಸ್ವರ್ಗವೆಂದೇ ಪ್ರತೀತಿ. ಆದರೆ ಈ ವರ್ಷ ದೊಡ್ಡ ಮೊತ್ತದ ಪಂದ್ಯ ನಡೆದಿಲ್ಲ. ಈ ಮೈದಾನದಲ್ಲಿ ರನ್ ಚೇಸ್ ಸುಲಭವಾಗಿದ್ದು, ಟಾಸ್ ಗೆಲ್ಲುವ ನಾಯಕ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳಬಹುದು.
ಬೆಂಗಳೂರಿನ ಆಕಾಶ ಶುಭ್ರವಾಗಿದೆ. ನಗರದಲ್ಲಿ ಬಿಸಿಲಿನ ವಾತಾವರಣವಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ಗೆ ಮೈದಾನದ ಸಿಬ್ಬಂದಿ ಕಳೆದ 2 ದಿನಗಳಿಂದ ಹೊದಿಕೆ ಹಾಕಿದ್ದು, ಪರಿಸ್ಥಿತಿಯು 2017ರಲ್ಲಿ ಇದ್ದಂತಿದೆ. ರಾಜಸ್ಥಾನದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ಮೈದಾನದ ಬಗ್ಗೆ ಚೆನ್ನಾಗಿ ಗೊತ್ತಿದೆ. ಯಾರು ಪಿಚ್ ಅನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲಿದ್ದಾರೆಂಬ ಪ್ರಶ್ನೆ ಉದ್ಬವಿಸಿದೆ.
ತಂಡಗಳು
► ಆರ್ಸಿಬಿ: 1.ಫಿಲ್ ಸಾಲ್ಟ್, 2. ವಿರಾಟ್ ಕೊಹ್ಲಿ, 3. ದೇವದತ್ತ ಪಡಿಕ್ಕಲ್, 4. ರಜತ್ ಪಾಟಿದಾರ್(ನಾಯಕ), 5. ಜಿತೇಶ್ ಶರ್ಮಾ(ವಿಕೆಟ್ಕೀಪರ್), 6. ರೊಮಾರಿಯೊ ಶೆಫರ್ಡ್, 7. ಟಿಮ್ ಡೇವಿಡ್, 8. ಕೃನಾಲ್ ಪಾಂಡ್ಯ, 9. ಭುವನೇಶ್ವರ ಕುಮಾರ್, 10. ಜೋಶ್ ಹೇಝಲ್ವುಡ್, 11.ಯಶ್ ದಯಾಳ್, 12. ಸುಯಶ್ ಶರ್ಮಾ.
ರಾಜಸ್ಥಾನ ರಾಯಲ್ಸ್: 1.ವೈಭವ್ ಸೂರ್ಯವಂಶಿ, 2. ಯಶಸ್ವಿ ಜೈಸ್ವಾಲ್, 3. ನಿತಿಶ್ ರಾಣಾ, 4. ರಿಯಾನ್ ಪರಾಗ್(ನಾಯಕ), 5. ಧ್ರುವ್ ಜುರೆಲ್(ವಿಕೆಟ್ಕೀಪರ್), 6. ಶಿಮ್ರೊನ್ ಹೆಟ್ಮೆಯರ್, 7. ಶುಭಮ್ ದುಬೆ, 8. ವನಿಂದು ಹಸರಂಗ, 9. ಜೋಫ್ರಾ ಆರ್ಚರ್, 10. ಮಹೀಶ್ ತೀಕ್ಷಣ, 11. ತುಷಾರ್ ದೇಶಪಾಂಡೆ, 12. ಸಂದೀಪ್ ಶರ್ಮಾ/ಆಕಾಶ್ ಮಧ್ವಾಲ್.
► ಅಂಕಿ-ಅಂಶ
► ಆರ್ಸಿಬಿ ಸ್ಪಿನ್ನರ್ ಗಳು ತವರು ಮೈದಾನದಲ್ಲಿ ಪರದಾಡುತ್ತಿದ್ದು, 15 ಓವರ್ ಗಳಲ್ಲಿ 9.6 ಇಕಾನಮಿ ರೇಟ್ ನಲ್ಲಿ ಕೇವಲ 1 ವಿಕೆಟ್ ಪಡೆದಿದ್ದಾರೆ. ತವರಿನಿಂದ ಹೊರಗೆ 8.5 ಇಕಾನಮಿ ರೇಟ್ ನಲ್ಲಿ ಒಟ್ಟು 15 ವಿಕೆಟ್ ಪಡೆದಿದ್ದಾರೆ.
► ವಿರಾಟ್ ಕೊಹ್ಲಿ ಈ ವರ್ಷ ಆರ್ಸಿಬಿ ತಂಡದ ಮೂರು ಯಶಸ್ವಿ ರನ್ ಚೇಸ್ ವೇಳೆ ಅಜೇಯ ಅರ್ಧಶತಕ ಗಳಿಸಿದ್ದಾರೆ. ತನಗಿರುವ ‘ಚೇಸ್ ಮಾಸ್ಟರ್’ ಬಿರುದಿಗೆ ತಕ್ಕಂತೆ ಆಡುತ್ತಿದ್ದಾರೆ.
► ಜೋಫ್ರಾ ಆರ್ಚರ್ ರಾಜಸ್ಥಾನದ ಪವರ್ ಪ್ಲೇ ವೇಳೆ 17 ಓವರ್ ಗಳಲ್ಲಿ 8.2ರ ಇಕಾನಮಿ ರೇಟ್ ನಲ್ಲಿ 6 ವಿಕೆಟ್ಗಳನ್ನು ಪಡೆದು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಉಳಿದ ಬೌಲರ್ ಗಳು 31 ಓವರ್ ಗಳಲ್ಲಿ ಕೇವಲ 3 ವಿಕೆಟ್ಗಳನ್ನು ಪಡೆದಿದ್ದಾರೆ.
► ಮೊದಲ 3 ಪಂದ್ಯಗಳಲ್ಲಿ ಕೇವಲ 34 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ತನ್ನ ಹಿಂದಿನ 5 ಇನಿಂಗ್ಸ್ ಗಳಲ್ಲಿ ನಾಲ್ಕು ಬಾರಿ ಕ್ಷಿಪ್ರಗತಿಯಲ್ಲಿ ಅರ್ಧಶತಕ ಗಳಿಸಿ ರಾಜಸ್ಥಾನ ತಂಡಕ್ಕೆ ವಿಶ್ವಾಸ ತುಂಬಿದ್ದಾರೆ.
►ಹೆಡ್-ಟು-ಹೆಡ್ ದಾಖಲೆ
ಪಂದ್ಯಗಳು: 33
ಆರ್ಸಿಬಿಗೆ ಗೆಲುವು: 16
ರಾಜಸ್ಥಾನ ರಾಯಲ್ಸ್ಗೆ ಜಯ: 14
ಫಲಿತಾಂಶ ರಹಿತ: 03