ವಿರಾಟ್ ಕೊಹ್ಲಿ ಮತ್ತೆ RCB ನಾಯಕ?; ಸುಳಿವು ನೀಡಿದ ಎಬಿ ಡಿ ವಿಲಿಯರ್ಸ್
ಬೆಂಗಳೂರು: 2025ರ ಐಪಿಎಲ್ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಮರಳಬಹುದು ಎಂಬ ಸುಳಿವನ್ನು RCB ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ನೀಡಿದ್ದಾರೆ. ಹೀಗಿದ್ದೂ, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇನ್ನೂ ತಂಡದ ನಾಯಕತ್ವದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲದಿರುವುದರಿಂದ, ವ್ಯಾಪಕ ವದಂತಿಗಳು ಹರಿದಾಡುತ್ತಿವೆ.
2013ರಿಂದ 2021ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ, ತಂಡದ ನಾಯಕತ್ವದ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಅವರ ನಾಯಕತ್ವದ ಅವಧಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಲ್ಕು ಬಾರಿ ಪ್ಲೇ ಆಫ್ ಹಂತ ತಲುಪಿತ್ತು ಹಾಗೂ 2016ರಲ್ಲಿ ಪ್ರಶಸ್ತಿಯ ಸನಿಹಕ್ಕೆ ತಲುಪಿತ್ತು. ಅವರು ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗುವ ಸಾಧ್ಯತೆ ಇದೆ ಎಂಬ ವರದಿಗಳಿಂದ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸಬಹುದು ಎಂಬ ಆಸೆ ತಂಡದ ಅಭಿಮಾನಿಗಳಲ್ಲಿ ಮತ್ತೆ ಚಿಗುರಿದೆ.
ಈ ಕುರಿತು ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿರುವ ಎಬಿ ಡಿ ವಿಲಿಯರ್ಸ್, “ಈ ಸಂಗತಿ ದೃಢಪಟ್ಟಿದೆಯೆ ಎಂಬುದು ನನಗಿನ್ನೂ ತಿಳಿದಿಲ್ಲ. ಆದರೆ, ಅವರು ನಾಯಕರಾಗಲಿದ್ದಾರೆ. ನಾನು ತಂಡದ ಬಗ್ಗೆ ಯೋಚಿಸುತ್ತಿದ್ದೇನೆ” ಎಂದು ಹೇಳುವ ಮೂಲಕ ವಿರಾಟ್ ಕೊಹ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ಮರಳುವ ಸುಳಿವು ನೀಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯರಂತಹ ಅನುಭವಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದರೂ, ಇವರಿಬ್ಬರಿಗೂ ಐಪಿಎಲ್ ನಾಯಕತ್ವದ ಗಮನಾರ್ಹ ಅನುಭವವಿಲ್ಲ. ಹೀಗಾಗಿ, ವಿರಾಟ್ ಕೊಹ್ಲಿಯೇ ಅಂತಿಮ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗಿದೆ.