ಕೇನ್ ವಿಲಿಯಮ್ಸನ್ ಬೆರಳಿಗೆ ಗಾಯ: 3 ಪಂದ್ಯಗಳಿಗೆ ಅಲಭ್ಯ
ಮುಂಬೈ, ಅ. 14: ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ವಿಕೆಟ್ಗಳ ನಡುವೆ ಓಡುವಾಗ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್, ತಂಡದ ಕನಿಷ್ಠ ಮುಂದಿನ ಮೂರು ಪಂದ್ಯಗಳಲ್ಲಿ ಆಡಲು ಲಭ್ಯವಿರುವುದಿಲ್ಲ. ಇದರಲ್ಲಿ ಭಾರತದ ವಿರುದ್ಧದ ಪಂದ್ಯವೂ ಸೇರಿದೆ.
ಶುಕ್ರವಾರದ ಬಾಂಗ್ಲಾದೇಶದ ವಿರುದ್ಧದ ಪಂದ್ಯವು ಆರು ತಿಂಗಳಿಗೂ ಅಧಿಕ ಅವಧಿಯಲ್ಲಿ ಅವರು ಆಡಿದ ಮೊದಲ ಅಂತರ್ರಾಷ್ಟ್ರೀಯ ಪಂದ್ಯವಾಗಿತ್ತು. ಅವರು ಮಾರ್ಚ್ನಲ್ಲಿ ಐಪಿಎಲ್ ಪಂದ್ಯವೊಂದರಲ್ಲಿ ಗಾಯಗೊಂಡಿದ್ದು, ಅದಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದರಿಂದ ಚೇತರಿಸಿಕೊಳ್ಳಲು ಅವರು 6 ತಿಂಗಳಿಗೂ ಅಧಿಕ ಸಮಯವನ್ನು ತೆಗೆದುಕೊಂಡಿದ್ದರು.
ಶುಕ್ರವಾರ ಚೆನ್ನೈಯ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 78 ರನ್ಗಳನ್ನು ಗಳಿಸಿದ ಬಳಿಕ ಗಾಯಗೊಂಡು ನಿವೃತ್ತಿಯಾಗಿದ್ದರು.
ಗಾಯದಿಂದ ಚೇತರಿಸಿಕೊಳ್ಳುವ ಅವಧಿಯಲ್ಲಿ, ಅವರು ಕನಿಷ್ಠ ಮೂರು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಅವುಗಳೆಂದರೆ, ಅಕ್ಟೋಬರ್ 18ರಂದು ನಡೆಯುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ, ಅಕ್ಟೋಬರ್ 22ರಂದು ನಡೆಯಲಿರುವ ಭಾರತ ವಿರುದ್ಧದ ಪಂದ್ಯ ಮತ್ತು ಅಕ್ಟೋಬರ್ 28ರಂದು ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ.
ನವೆಂಬರ್ನಲ್ಲಿ ನಡೆಯಲಿರುವ ಉಳಿದ ಮೂರು ಲೀಗ್ ಪಂದ್ಯಗಳಲ್ಲಿ ಅವರು ಪಾಲ್ಗೊಳ್ಳುವುದು ಅವರು ಎಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ ಎನ್ನುವುದನ್ನು ಅವಲಂಬಿಸಿದೆ.