ಮಹಿಳೆಯರ ಜೂನಿಯರ್ ಏಶ್ಯಕಪ್-2024 | ಮಲೇಶ್ಯ ವಿರುದ್ಧ ಭಾರತದ ಹಾಕಿ ತಂಡಕ್ಕೆ 5-0 ಗೆಲುವು
ಕೌಲಾಲಂಪುರ : ನಿಧಾನಗತಿಯ ಆರಂಭದಿಂದ ಹೊರ ಬಂದ ಹಾಲಿ ಚಾಂಪಿಯನ್ ಭಾರತದ ಹಾಕಿ ತಂಡವು ಮಲೇಶ್ಯದ ವಿರುದ್ಧ ಮಹಿಳೆಯರ ಜೂನಿಯರ್ ಏಶ್ಯಕಪ್ ಪಂದ್ಯದಲ್ಲಿ 5-0 ಅಂತರದಿಂದ ಜಯ ಸಾಧಿಸಿದೆ.
ಈ ಮೊದಲು 2015ರಲ್ಲಿ 9-1 ಹಾಗೂ 2023ರಲ್ಲಿ 2-1 ಅಂತರದಿಂದ ಜಯ ಸಾಧಿಸಿರುವ ಭಾರತ ತಂಡವು ಪಂದ್ಯಾವಳಿಯ ಇತಿಹಾಸದಲ್ಲಿ ಸತತ ಮೂರನೇ ಬಾರಿ ಮಲೇಶ್ಯದ ವಿರುದ್ಧ ಗೆಲುವು ದಾಖಲಿಸಿದೆ.
ರವಿವಾರ ಬಾಂಗ್ಲಾದೇಶ ವಿರುದ್ಧ 13-1 ಅಂತರದಿಂದ ಸುಲಭವಾಗಿ ಜಯ ಸಾಧಿಸಿದ ನಂತರ ಭಾರತ ತಂಡವು ಸೋಮವಾರ ನಡೆದ ಪಂದ್ಯದಲ್ಲಿ ಮಲೇಶ್ಯದ ವಿರುದ್ಧವೂ ಪ್ರಾಬಲ್ಯ ಸಾಧಿಸಿತು. ಆರಂಭದಲ್ಲಿ ಮಲೇಶ್ಯದಿಂದ ತೀವ್ರ ಪ್ರತಿರೋಧ ಎದುರಿಸಿದ ಭಾರತವು ಅ ನಂತರ ತನ್ನ ಲಯ ಕಂಡುಕೊಂಡಿತು. ಒಮ್ಮೆ ಆರಂಭಿಕ ಗೋಲು ಗಳಿಸಿದ ನಂತರ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಂಡು ಉತ್ತಮ ಪ್ರದರ್ಶನ ನೀಡಿತು.
ಭಾರತದ ಪರ ದೀಪಿಕಾ(37ನೇ, 39ನೇ, 48ನೇ)ಹ್ಯಾಟ್ರಿಕ್ ಗೋಲು ಗಳಿಸಿದರೆ, ವೈಷ್ಣವಿ ಫಾಲ್ಕೆ(32ನೇ)ಹಾಗೂ ಕನಿಕಾ ಸಿವಾಚ್(38ನೇ)ತಲಾ ಒಂದು ಗೋಲು ಗಳಿಸಿದರು.
ಈ ಮಧ್ಯೆ ಭಾರತ ತಂಡವು ಹಲವು ಗೋಲು ಗಳಿಸುವ ಅವಕಾಶಗಳನ್ನು ಕಳೆದುಕೊಂಡಿತು. ಹಾಲಿ ಚಾಂಪಿಯನ್ ಮೂರನೇ ಕ್ವಾರ್ಟರ್‌ನಲ್ಲಿ ಸ್ಕೋರ್ ಗಳಿಸಲು ಆರಂಭಿಸಿತು. 32ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ ಮೂಲಕ ಗೋಲು ಖಾತೆ ತೆರೆಯಿತು.
37ನೇ ನಿಮಿಷದಲ್ಲಿ ಭಾರತ ತಂಡವು 2ನೇ ಗೋಲು ಗಳಿಸಿದ್ದು, ಭಾರತವು ಮತ್ತೊಂದು ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿತು. ಸ್ಟಾರ್ ಡ್ರ್ಯಾಗ್-ಫ್ಲಿಕರ್ ದೀಪಿಕಾ ತನ್ನ ಚಾಣಾಕ್ಷತನವನ್ನು ಪ್ರದರ್ಶಿಸಿದ್ದು, ಹ್ಯಾಟ್ರಿಕ್ ಗೋಲು ಗಳಿಸಿದರು.
ಈ ಗೆಲುವಿನ ಮೂಲಕ ಭಾರತ ತಂಡವು ಎರಡನೇ ಸ್ಥಾನದಲ್ಲಿ ಉಳಿದುಕೊಂಡಿದ್ದು, ಚೀನಾದೊಂದಿಗೆ ಅಂಕವನ್ನು ಹಂಚಿಕೊಂಡಿದೆ. ಆದರೆ ಗೋಲು ವ್ಯತ್ಯಾಸದಲ್ಲಿ ಹಿಂದಿದೆ.
ಭಾರತ ತಂಡವು ಡಿ.11ರಂದು ಚೀನಾ ತಂಡವನ್ನು ಎದುರಿಸಲಿದೆ.